ತಾನು ಕೆಲಸ ಮಾಡುತ್ತಿದ್ದ ಅಮೆರಿಕಾ ಪ್ರಜೆ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸಗಾರನೊಬ್ಬನನ್ನು ಜೆ.ಬಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾನು ಕೆಲಸ ಮಾಡುತ್ತಿದ್ದ ಅಮೆರಿಕಾ ಪ್ರಜೆ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸಗಾರನೊಬ್ಬನನ್ನು ಜೆ.ಬಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುಧಾಮನಗರದ ನಿವಾಸಿ ಚಂದನ್‌ ರೌಲ್ ಬಂಧಿತನಾಗಿದ್ದು, ಆರೋಪಿಯಿಂದ 176 ಗ್ರಾಂ ವಜ್ರ ಹಾಗೂ ಚಿನ್ನಾಭರಣ ಹಾಗೂ 39 ಸಾವಿರ ರು. ನಗದು ಸೇರಿದಂತೆ ಒಂದು ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಕೋಡಿಹಳ್ಳಿಯ ರುಸ್ತುಂಬಾಗ್ ಮುಖ್ಯರಸ್ತೆಯಲ್ಲಿ ನೆಲೆಸಿರುವ ಅಮೆರಿಕದ ಮರಿಯೇಲಾ ಮೊರೆನೊ ದಂಪತಿ ವಿಲ್ಲಾದಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಮೊರೆನೊ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೈಟ್‌ಹೌಸ್‌ನ ಸಂಪರ್ಕ:

ಇಂದಿರಾನಗರ ಸಮೀಪದ ಖಾಸಗಿ ಕಂಪನಿಯಲ್ಲಿ ಮೊರೆನೊ ದಂಪತಿ ಉದ್ಯೋಗದಲ್ಲಿದ್ದು, ಹಲವು ವರ್ಷಗಳಿಂದ ಕೋಡಿಹಳ್ಳಿ ಸಮೀಪದ ವಿಲ್ಲಾದಲ್ಲಿ ಅವರು ನೆಲೆಸಿದ್ದಾರೆ. ಅಮೆರಿಕಾ ಅಧ್ಯಕ್ಷರ ಅಧಿಕೃತ ಕಾರ್ಯಾಲಯ ವೈಟ್‌ಹೌಸ್‌ ಜತೆಗೂ ಸಹ ದಂಪತಿಗೆ ಸಂಪರ್ಕವಿದೆ.

ಇತ್ತೀಚೆಗೆ ಕೆಲಸಕ್ಕೆ ತೆರಳಿದ್ದಾಗ ಅವರ ಮನೆಯಲ್ಲಿ ಮನೆಕೆಲಸದಾಳು ಚಂದನ್ ಚಿನ್ನಾಭರಣ ದೋಚಿದ್ದ. ಈ ಬಗ್ಗೆ ಅಮೆರಿಕಾ ರಾಯಭಾರ ಕಚೇರಿಗೆ ಮೊರೆನೊ ದಂಪತಿ ಮಾಹಿತಿ ನೀಡಿದ್ದರು. ಬಳಿಕ ನಗರ ಪೊಲೀಸರಿಗೆ ರಾಯಭಾರಿ ಕಚೇರಿ ಅಧಿಕಾರಿಗಳು ವಿಷಯ ತಿಳಿಸಿದ್ದರು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು, ಮನೆಕೆಲಸದಾಳನ್ನು ಸೆರೆ ಹಿಡಿದು ಕಳವು ಆಭರಣ ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಚಂದನ್‌, ಎರಡು ತಿಂಗಳ ಹಿಂದೆ ಖಾಸಗಿ ಏಜೆನ್ಸಿ ಮೂಲಕ ಮೊರೆನೊ ವಿಲ್ಲಾದಲ್ಲಿ ಕೆಲಸಕ್ಕೆ ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.