ಕನ್ನಡಪ್ರಭ ವಾರ್ತೆ ದಾವಣಗೆರೆ
ಖೋಟಾ ನೋಟು ಮುದ್ರಿಸಿ, ಚಲಾವಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ ₹40 ಸಾವಿರ ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ದಾವಣಗೆರೆ ಯಲ್ಲಮ್ಮ ನಗರದ ಎಸ್.ಅಶೋಕ (40) ಹಾಗೂ ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ವಾಸಿ ಹಾಲೇಶ ಅಲಿಯಾಸ್ ಅರಸನಾಳು ಹಾಲೇಶ (35) ಶಿಕ್ಷೆಗೆ ಗುರಿಯಾದ ಅಪರಾಧಿಗಳು. 2022ರ ಆ.10ರಂದು ಬೆಳಿಗ್ಗೆ 11 ಗಂಟೆಗೆ ಯಲ್ಲಮ್ಮ ನಗರದ ಮನೆಯೊಂದರಲ್ಲಿ ಖೋಟಾ ನೋಟು ಚಲಾವಣೆ ಮಾಡಲು ಇಬ್ಬರು ವ್ಯಕ್ತಿಗಳು ಬರುವ ಬಗ್ಗೆ ಆಗಿನ ಡಿಸಿಆರ್‌ಬಿ ಡಿವೈಎಸ್ಪಿ ಬಿ.ಎಸ್.ಬಸವರಾಜ ಅವರಿಗೆ ಮಾಹಿತಿ ದೊರೆತಿತ್ತು.
ಪರಸ್ಪರ ಇಬ್ಬರೂ ಗುಪ್ತವಾಗಿ ಕಿವಿಯಲ್ಲಿ ಮಿಸುಗುಡುತ್ತಿದ್ದುದನ್ನು ಗಮನಿಸಿದ ಡಿವೈಎಸ್ಪಿ ಹಾಗೂ ಸಿಬ್ಬಂದಿ ಇಬ್ಬರನ್ನೂ ಸೆರೆಹಿಡಿದು ವಿಚಾರಿಸಿ, ಶೋಧನೆ ನಡೆಸಿದ್ದಾರೆ. ಆಗ ₹500 ಮುಖಬೆಲೆಯ 183 ನಕಲಿ ನೋಟು, ₹200 ಮುಖಬೆಲೆಯ 133 ಖೋಟಾನೋಟು, ₹100 ಮುಖಬೆಲೆಯ 26 ನೋಟು ಸೇರಿದಂತೆ ಒಟ್ಟು 342 ನಕಲಿ ನೋಟುಗಳು ಪತ್ತೆಯಾಗಿದ್ದವು. ಅಸಲಿ ಮತ್ತು ನಕಲಿ ನೋಟು ತಾಳೆ ಮಾಡಿದಾಗ ತಾಳೆಯಾಗಿರಲಿಲ್ಲ. ಇದರಿಂದಾಗಿ ಖೋಟಾ ನೋಟುಗಳ ದಂಧೆ ಬಗ್ಗೆ ವಿಚಾರಿಸಿದ್ದಾರೆ. ಆಗ ಮನೆಯಲ್ಲಿ ಕಲರ್ ಜೆರಾಕ್ಸ್ ಯಂತ್ರದಲ್ಲಿ ಇಬ್ಬರೂ ಜೆರಾಕ್ಸ್ ಮಾಡಿದ ನೋಟುಗಳಿವು ಎಂಬ ವಿಚಾರ ಬಾಯಿಬಿಟ್ಟಿದ್ದರು. ಪಂಚರ ಸಮಕ್ಷಮ ಮನೆಯಲ್ಲಿ ಪಂಚನಾಮೆ ಮಾಡಿ, ಜಪ್ತಿ ಮಾಡಿದ ನಕಲಿ ನೋಟು, ಸ್ವತ್ತು ಸಮೇತ ಆರೋಪಿಗಳ ವಿರುದ್ಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸ್ ಮಾಡಲಾಗಿತ್ತು. ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಬಿ.ಮಂಜುನಾಥ ಪ್ರಕರಣದ ತನಿಖೆ ಕೈಗೊಂಡಿದ್ದರು.ಎಸ್.ಅಶೋಕ ಮತ್ತು ಹಾಲೇಶ ಅಲಿಯಾಸ್ ಅರಸನಾಳು ಹಾಲೇಶಿ ಖೋಟೋ ನೋಟುಗಳನ್ನು ತಯಾರಿಸಿ ಚಲಾವಣೆ ಮಾಡುತ್ತಿದ್ದರು. ₹100 ಮುಖಬೆಲೆಯ ನಕಲಿ ನೋಟನ್ನು ದೇವರಾಜ ಎಂಬ ಎಗ್‌ರೈಸ್ ವ್ಯಾಪಾರಿಗೆ ಚಲಾವಣೆ ಮಾಡಿದ್ದರು. ಆರೋಪಿ ಹಾಲೇಶ ಹಣ್ಣಿನ ವ್ಯಾಪಾರಿಗೆ ₹200 ಕೊಟ್ಟು, ಹಣ್ಣು ಖರೀದಿಸಿದ್ದರು. ಅನಂತರ ತಾವು ತಯಾರಿಸಿದ ನಕಲಿ ನೋಟುಗಳ ಚಲಾವಣೆಗೆ ಹೋಗುತ್ತಿದ್ದಾಗ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು.
ಬಂಧಿತರಿಂದ 1 ಕಟರ್, 2 ಗ್ರೀನ್ ಕಲರ್ ಜೆಲ್ ಪೆನ್, ₹500 ಮುಖಬೆಲೆಯ 183 ನಕಲಿ ನೋಟು, ₹200 ಮುಖಬೆಲೆಯ 133 ನಕಲಿ ನೋಟು, ₹100 ಮುಖಬೆಲೆಯ 26 ಖೋಟಾ ನೋಟು, ಎಪ್ಸಾನ್ ಕಂಪನಿ ಜೆರಾಕ್ಸ್ ಯಂತ್ರ, ಸ್ಯಾಮ್‌ಸಾಂಗ್ ಮೊಬೈಲ್, ಸ್ಟೀಲ್ ಸ್ಕೇಲ್, ರೆಡ್‌ಮಿ ಮೊಬೈಲ್, 120 ಎ4 ಸೈಜ್‌ನ ಪೇಪರ್‌ಗಳನ್ನು ಜಪ್ತಿ ಮಾಡಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಆರ್.ಎನ್. ಪ್ರವೀಣಕುಮಾರ ಖೋಟಾ ನೋಟು ಪ್ರಕರಣದ ಆರೋಪಿಗಳಾದ ಎಸ್.ಅಶೋಕ, ಹಾಲೇಶ ಅಲಿಯಾಸ್ ಅರಸನಾಳು ಹಾಲೇಶಗೆ 5 ವರ್ಷ ಕಾರಾಗೃಹ ಶಿಕ್ಷೆ, ತಲಾ ₹40 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇದ್ದುದರಿಂದ ಬಂಧನ ಅವಧಿ ಪರಿಗಣಿಸಿ ಆದೇಶಿಸಿದ್ದಾರೆ. ಸರ್ಕಾರದ ಪರ ವಕೀಲ ಕೆ.ಜಯಪ್ಪ ವಾದ ಮಂಡಿಸಿದ್ದರು. ತನಿಖಾಧಿಕಾರಿ ಬಿ.ಮಂಜುನಾಥ, ಸಿಬ್ಬಂದಿ, ಸರ್ಕಾರಿ ವಕೀಲರ ಕಾರ್ಯವನ್ನು ಜಿಲ್ಲಾ ಎಸ್‌ಪಿ ಡಾ. ಎಚ್.ಟಿ.ಶೇಖರ್ ಶ್ಲಾಘಿಸಿದ್ದಾರೆ.