ರನ್ಯಾ ರಾವ್ಗೆ ರ್ಪೋರ್ಟಲ್ಲಿ ಶಿಷ್ಟಾಚಾರ ಸೌಲಭ್ಯ ಕಲ್ಪಿಸಿದ ಆರೋಪ - ಡಿಜಿಪಿಗೆ ಕಡ್ಡಾಯ ರಜೆ ನೀಡಿದ ಸರ್ಕಾರ

Published : Mar 14, 2025, 09:42 AM ISTUpdated : Mar 14, 2025, 09:55 AM IST
Kannada Actress Ranya Rao Smuggling Gold

ಸಾರಾಂಶ

ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ತಮ್ಮ ಮಲ ಮಗಳಿಗೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯ ಕಲ್ಪಿಸಿದ ಆರೋಪ ಬೆನ್ನಲ್ಲೇ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ ಎಂದು ತಿಳಿದು ಬಂದಿದೆ.

  ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ತಮ್ಮ ಮಲ ಮಗಳಿಗೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯ ಕಲ್ಪಿಸಿದ ಆರೋಪ ಬೆನ್ನಲ್ಲೇ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಗುರುವಾರ ರಾಜ್ಯ ಸರ್ಕಾರ ಸೂಚಿಸಿದೆ ಎಂದು ತಿಳಿದು ಬಂದಿದೆ.

ಡಿಜಿಪಿ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮೂಲಕ ಸರ್ಕಾರ ನಿರ್ದೇಶ ನೀಡಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರಬೀಳಬೇಕಿದೆ. ಈ ಸೂಚನೆ ಬೆನ್ನಲ್ಲೇ ಮಧ್ಯಾಹ್ನ ಕಚೇರಿಯಿಂದ ಡಿಜಿಪಿ ರಾಮಚಂದ್ರರಾವ್ ತೆರಳಿದ್ದಾರೆ ಎನ್ನಲಾಗಿದೆ.

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕೆಗೆ ಕಾನೂನು ಬಾಹಿರವಾಗಿ ಶಿಷ್ಟಾಚಾರ (ಪ್ರೋಟೋಕಾಲ್‌) ಸೌಲಭ್ಯ ಸಿಕ್ಕಿದ್ದು ಬಯಲಾಗಿ ವಿವಾದಕ್ಕೆ ಕಾರಣವಾಗಿತ್ತು. ಈ ಕಾನೂನುಬಾಹಿರ ಶಿಷ್ಟಾಚಾರ ಪಡೆದ ಆರೋಪ ಸಂಬಂಧ ಡಿಜಿಪಿ ರಾಮಚಂದ್ರರಾವ್ ವಿರುದ್ಧ ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ತಂಡವನ್ನು ಸರ್ಕಾರ ರಚಿಸಿತ್ತು. ಈ ಮಧ್ಯೆ ಅವರ ಮಲ ಮಗಳ ಮನೆ ಮೇಲೆ ಇ.ಡಿ ಕೂಡ ದಾಳಿ ನಡೆಸಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಡಿಜಿಪಿ ಅವರನ್ನು ಸರ್ಕಾರ ರಜೆ ಮೇಲೆ ಕಳುಹಿಸಿದೆ ಎಂದು ಮೂಲಗಳು ಹೇಳಿವೆ.

ಗೌರವ್ ಗುಪ್ತ ತಂಡಕ್ಕೆ ಕೃಷ್ಣವಂಶಿ ನಿಯೋಜನೆ

ವಿಮಾನ ನಿಲ್ದಾಣದಲ್ಲಿ ಡಿಜಿಪಿ ಮಲ ಮಗಳು ಹಾಗೂ ನಟಿ ರನ್ಯಾರಾವ್‌ ಅವರಿಗೆ ಕಾನೂನುಬಾಹಿರವಾಗಿ ಶಿಷ್ಟಾಚಾರ ಸೌಲಭ್ಯ ನೀಡಿದ ಪ್ರಕರಣ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡಕ್ಕೆ ಸಿಐಡಿ ಡಿಐಜಿ ಕೃಷ್ಣವಂಶಿ ಅವರನ್ನು ಸರ್ಕಾರ ನೇಮಿಸಿದೆ. ಎಸಿಎಸ್‌ ಗೌರವ ಗುಪ್ತಾ ಅವರಿಗೆ ಡಿಐಜಿ ಸಹಾಯಕ ತನಿಖಾಧಿಕಾರಿಯಾಗಿದ್ದಾರೆ.

ರನ್ಯಾಗೆ ಪ್ರೋಟೋಕಾಲ್‌ಗೆ ಸೂಚಿಸಿದ್ದ ಡಿಜಿಪಿ!

‘ನನಗೆ ದುಬೈನಿಂದಲೇ ರನ್ಯಾ ರಾವ್‌ ಕರೆ ಮಾಡಿ ಶಿಷ್ಟಾಚಾರ (ಪ್ರೋಟೋಕಾಲ್‌) ಪ್ರಕಾರ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಕುಟುಂಬದವರು ಯಾರೇ ಬಂದರೂ ಶಿಷ್ಟಾಚಾರ ನೀಡುವಂತೆ ಡಿಜಿಪಿ ರಾಮಚಂದ್ರರಾವ್‌ ಅವರ ಸೂಚನೆ ಇತ್ತು’ ಎಂದು ಡಿಆರ್‌ಐಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆ ಶಿಷ್ಟಾಚಾರ ವಿಭಾಗದ ಹೆಡ್‌ ಕಾನ್‌ಸ್ಟೇಬಲ್‌ ಬಸವರಾಜು ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಯ ಹಿನ್ನೆಲೆಯಲ್ಲಿ ತಮ್ಮ ಮಲ ಮಗಳು ರನ್ಯಾ ಅವರಿಗೆ ಕಾನೂನುಬಾಹಿರವಾಗಿ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯವನ್ನು ರಾಜ್ಯ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್‌ ಕಲ್ಪಿಸಿದ್ದರು ಎಂಬ ಆರೋಪಕ್ಕೆ ಸಾಕ್ಷಿ ಸಿಕ್ಕಿದೆ. ಇದು ಡಿಜಿಪಿಗೆ ಮತ್ತಷ್ಟು ಸಂಕಷ್ಟ ತಂದಿದೆ.

ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಹೆಡ್ ಕಾನ್‌ಸ್ಟೇಬಲ್ ಬಸವರಾಜು ಅವರನ್ನು ಡಿಆರ್‌ಐ ವಿಚಾರಣೆ ನಡೆಸಿ ಹೇಳಿಕೆ ಪಡೆದಿತ್ತು. ಮಾ.3ರಂದು ರಾತ್ರಿ ದುಬೈನಿಂದ ಕೆಐಎನಲ್ಲಿ ಬಂದಿಳಿದಿದ್ದ ರನ್ಯಾರನ್ನು ಕರೆತರಲು ಹೋಗಿದ್ದಾಗ ಡಿಆರ್‌ಐಗೆ ಬಸವರಾಜು ಸಿಕ್ಕಿಬಿದ್ದಿದ್ದರು.

ರಾಮಚಂದ್ರರಾವ್‌ ಸೂಚನೆ: ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಬಸವರಾಜು ಅಲಿಯಾಸ್ ಬಸಪ್ಪ ಐ.ಬಿಳ್ಳೂರು 2012ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದು, ಪ್ರಸ್ತುತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಹೆಡ್‌ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುವ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಕುಟುಂಬದವರಿಗೆ ಶಿಷ್ಟಾಚಾರ ಸೌಲಭ್ಯ ಕಲ್ಪಿಸುವ ಕೆಲಸವನ್ನು ಅಧಿಕಾರಿಗಳು ಕೊಟ್ಟಿದ್ದರು. ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ನೀಡುವಂತೆ ಬಸವರಾಜು ಅವರಿಗೆ ಖುದ್ದು ಡಿಜಿಪಿ ರಾಮಚಂದ್ರರಾವ್ ಕೂಡ ಸೂಚಿಸಿದ್ದರು. ಅದರಂತೆ ನಟಿ ರನ್ಯಾರಿಗೆ ಪೊಲೀಸರು ಶಿಷ್ಟಾಚಾರ ಕಲ್ಪಿಸಿದ್ದರು ಎಂದು ಡಿಆರ್‌ಐ ವಿಚಾರಣೆ ವೇಳೆ ಹೆಡ್‌ ಕಾನ್ಸ್‌ಸ್ಟೆಬಲ್‌ ಉಲ್ಲೇಖಿಸಿದ್ದಾರೆ.

ಮಾ.3ರಂದು ದುಬೈನಿಂದ ನನಗೆ ರನ್ಯಾ ಕರೆ ಮಾಡಿ ರಾತ್ರಿ 7ಕ್ಕೆ ವಿಮಾನದಲ್ಲಿ ಬರುತ್ತೇನೆ. ನನ್ನನ್ನು ಕಸ್ಟಮ್ಸ್‌ ಗ್ರೀನ್ ಚಾನೆಲ್ (ಹೆಚ್ಚು ತಪಾಸಣೆ ಇಲ್ಲದೆ) ಮೂಲಕ ಕರೆದೊಯ್ಯುವಂತೆ ಸೂಚಿಸಿದ್ದರು. ಅಂತೆಯೇ ದುಬೈ ವಿಮಾನ ಕೆಐಎನಲ್ಲಿ ಬಂದಿಳಿದ ಕೂಡಲೇ ವಿಮಾನ ನಿಲ್ದಾಣದೊಳಗೆ ತೆರಳಿ ಶಿಷ್ಟಾಚಾರ ಮೂಲಕ ರನ್ಯಾರನ್ನು ಕರೆತರಲು ಸಹೋದ್ಯೋಗಿ ಹಾಗೂ ವಿಮಾನ ನಿಲ್ದಾಣದ ಗುಪ್ತದಳ ವಿಭಾಗದ ಕಾನ್‌ಸ್ಟೇಬಲ್ ಧನುಶ್ ಕುಮಾರ್ ಜತೆ ಹೋಗಿದ್ದೆ. ನನಗೆ ಚಿನ್ನ ಸಾಗಣೆ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಡಿಆರ್‌ಐಗೆ ಬಸವರಾಜು ಹೇಳಿಕೆ ಕೊಟ್ಟಿದ್ದಾರೆ.

ನನಗೆ ಡಿಜಿಪಿ ರಾಮಚಂದ್ರರಾವ್‌ ಪರಿಚಯವಿತ್ತು. ಹೀಗಾಗಿ ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ಶಿಷ್ಟಾಚಾರ ನೀಡುವಂತೆ ಡಿಜಿಪಿ ಸೂಚಿಸಿದ್ದರು. ಅಧಿಕಾರಿಗಳ ಸೂಚನೆಯಂತೆ ನಾನು ಕೆಲಸ ಮಾಡಿದ್ದೇನೆ. ನನಗೆ ಅವರ ಯಾವುದೇ ವ್ಯವಹಾರದ ಬಗ್ಗೆಯೂ ಗೊತ್ತಿಲ್ಲ ಎಂದು ಬಸವರಾಜು ಸ್ಪಷ್ಟಪಡಿಸಿದ್ದಾರೆ.

ಬಸವರಾಜು ಜತೆ ಹೋಗಿದ್ದೆ ಧನುಷ್

ನನಗೆ ರನ್ಯಾ ರಾವ್‌ ಪರಿಚಯವಿರಲಿಲ್ಲ. ದುಬೈನಿಂದ ಬಂದಿಳಿದ್ದ ರನ್ಯಾರನ್ನು ಗ್ರೀನ್‌ ಚಾನೆಲ್‌ ಮೂಲಕ ಕರೆತರಲು ಸಹೋದ್ಯೋಗಿ ಬಸವರಾಜು ಜತೆ ಹೋಗಿದ್ದೆ. ನನಗೆ ಚಿನ್ನ ಕಳ್ಳ ಸಾಗಣೆ ಕುರಿತು ಗೊತ್ತಿರಲಿಲ್ಲ. ನಾನೇ ಅದೇ ಮೊದಲ ಬಾರಿ ಶಿಷ್ಟಾಚಾರ ಕೆಲಸ ಮಾಡಿದ್ದೇನೆ ಎಂದು ವಿಮಾನ ನಿಲ್ದಾಣದ ಗುಪ್ತದಳ ವಿಭಾಗದ ಕಾನ್‌ಸ್ಟೇಬಲ್‌ ಧನುಷ್ ಸಹ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌