ಅಜಾಗ್ರತೆಯ ಚಾಲನೆಯಿಂದ ಅಪಘಾತ ಉಂಟು ಮಾಡಿ ಕಾರು ಚಾಲಕನೋರ್ವನ ಸಾವಿಗೆ ಕಾರಣವಾಗಿದ್ದ ಪ್ರಕರಣದಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿದ್ದ ಚಿಕ್ಕಮಗಳೂರು ಎಸ್.ಸಂತೋಷ್ ಎಂಬಾತನಿಗೆ ಆರು ತಿಂಗಳ ಸಾಧಾರಣಾ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಬೆಂಗಳೂರು : ಅತಿವೇಗ ಹಾಗೂ ಅಜಾಗ್ರತೆಯ ಚಾಲನೆಯಿಂದ ಅಪಘಾತ ಉಂಟು ಮಾಡಿ ಕಾರು ಚಾಲಕನೋರ್ವನ ಸಾವಿಗೆ ಕಾರಣವಾಗಿದ್ದ ಪ್ರಕರಣದಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ನಿಡುವಾಳೆ ಗ್ರಾಮದ ನಿವಾಸಿ ಎಸ್.ಸಂತೋಷ್ ಎಂಬಾತನಿಗೆ ಆರು ತಿಂಗಳ ಸಾಧಾರಣಾ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವಿಚಾರಣಾ ನ್ಯಾಯಾಲಯ ಆದೇಶ ರದ್ದು ಕೋರಿ ಆರೋಪಿ ಸಂತೋಷ್ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರ ಪೀಠ ಆದೇಶಿಸಿದೆ.
ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ಅಪಘಾತಗಳ ಸಂಭವಿಸಲು ಕಾರಣರಾದವರಿಗೆ ಕನಿಷ್ಠ ಶಿಕ್ಷೆ ಹಾಗೂ ದಂಡ ವಿಧಿಸದಿದ್ದರೆ ಸಮಾಜ ಮತ್ತು ಸಂತ್ರಸ್ತರ ಕುಟುಂಬಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಲದೆ, ಚಾಲಕರ ಅಜಾಗರೂಕ ಚಾಲನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಆರೋಪಿ ಸಂತೋಷ್ 2011ರ ಏ.19ರಂದು ಆ್ಯಂಬುಲೆನ್ಸ್ ಅನ್ನು ಮೂಡಿಗೆರೆಯಿಂದ ಮಂಗಳೂರು ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದರು. ಆ್ಯಂಬುಲೆನ್ಸ್ ಬಿದರಳ್ಳಿ ಗ್ರಾಮದಲ್ಲಿ ಮಾರುತಿ ಆಲ್ಟೋ ಕಾರಿಗೆ ಢಿಕ್ಕಿ ಹೊಡೆದಿತ್ತು. ಘಟನೆಯಿಂದ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಇತರೆ ಮೂವರು ಪ್ರಯಾಣಿಕರು ಗಾಯಗೊಂಡಿದ್ದರು. ತನಿಖೆ ನಡೆಸಿದ್ದ ಮೂಡಿಗೆರೆ ಪೊಲೀಸರು, ಸಂತೋಷ್ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಆ್ಯಂಬುಲೆನ್ಸ್ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಮೂಡಿಗೆರೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಸಂತೋಷ್‌ಗೆ 6 ತಿಂಗಳ ಸಾಧಾರಣ ಜೈಲು ಶಿಕ್ಷೆ ಮತ್ತು ನಾಲ್ಕು ಸಾವಿರ ರು. ದಂಡ ವಿಧಿಸಿತ್ತು. ಆ ಆದೇಶವನ್ನು ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯ ಸಹ ಎತ್ತಿಹಿಡಿದಿತ್ತು. ಇದರಿಂದ ಆರೋಪಿ ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.