ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನಿವೃತ್ತ ಅಧಿಕಾರಿಯೊಬ್ಬರು ತಮ್ಮ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ತಾವೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

- ತಾನೂ ಆತ್ಮಹತ್ಯೆಗೆ ಯತ್ನಿಸಿದ ಇಸ್ರೋ ನಿವೃತ್ತ ಉದ್ಯೋಗಿ

- ಬೆಂಗಳೂರಿನಲ್ಲಿ ಮಾನಸಿಕ ಕಾಯಿಲೆಪೀಡಿತನ ಕೃತ್ಯ

ಅಂತ್ಯಸಂಸ್ಕಾರಕ್ಕೆ

ಬರಲ್ಲ ಎಂದ ಪುತ್ರಿ!- ಅಮೆರಿಕದಲ್ಲಿ ನೆಲೆಸಿರುವ ಮಗಳುತನ್ನ ತಾಯಿ ಹತ್ಯೆ ವಿಚಾರವನ್ನು ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಮೃತರ ಮಗಳಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಯಿತು. ಆದರೆ ತಾನು ಅಂತ್ಯಕ್ರಿಯೆಗೆ ಬರಲು ಸಾಧ್ಯವಿಲ್ಲ ಎಂದು ಅವರ ಪುತ್ರಿ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಮೃತದೇಹವನ್ನು ಸಂಧ್ಯಾ ಅವರ ಸೋದರಿ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

--

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನಿವೃತ್ತ ಅಧಿಕಾರಿಯೊಬ್ಬರು ತಮ್ಮ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ತಾವೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಬೊಮ್ಮನಹಳ್ಳಿ ಹತ್ತಿರದ ವರ್ಚ್ಯುವಸೋ ಅಪಾರ್ಟ್‌ಮೆಂಟ್ ನಿವಾಸಿ ಸಂಧ್ಯಾ (55) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಮೃತರ ಪತಿ ನಾಗೇಶ್ವರ್ ರಾವ್ ಅವರನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ತಮ್ಮ ಅನಾರೋಗ್ಯ ಪರಿಣಾಮ ನಾಗೇಶ್ವರ್‌ ರಾವ್‌ ಖಿನ್ನತೆಗೊಳಗಾಗಿದ್ದರು. ತಾವು ಸಾವಿಗೀಡಾದರೆ ಪತ್ನಿ ಕಾಳಜಿ ಮಾಡುವವರು ಯಾರು? ಏಕೈಕ ಮಗಳು ಅಮೆರಿಕದಲ್ಲಿದ್ದಾಳೆ. ಅವಳ ಹೊರತು ಸಂಬಂಧಿಗಳಿಲ್ಲ ಎಂಬುದು ರಾವ್ ಅವರ ಚಿಂತೆಯಾಗಿತ್ತು. ಈ ವ್ಯಾಕುಲ ಬಗ್ಗೆ ಮಗಳ ಬಳಿಯೂ ಹೇಳಿಕೊಂಡಿದ್ದರು. ಈ ಆತಂಕದಿಂದಲೇ ತೀವ್ರ ಜಿಗುಪ್ಸೆಗೊಂಡ ಅವರು ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಅಂತೆಯೇ ಮನೆಯಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಪತ್ನಿ ಸಂಧ್ಯಾ ಅವರ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದ ರಾವ್‌ ಬಳಿಕ ತಾವೂ ಆತ್ಮಹತ್ಯೆಗೆ ಮುಂದಾಗಿದ್ದರು. ಆದರೆ ಕೊನೇ ಕ್ಷಣದಲ್ಲಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ತಕ್ಷಣ ತಮ್ಮ ಆಪ್ತಮಿತ್ರನಿಗೆ ಕರೆ ಮಾಡಿ ಪತ್ನಿಯನ್ನು ಕೊಂದಿರುವ ಸಂಗತಿ ತಿಳಿಸಿದ್ದಾರೆ. ಆಗ ದೌಡಾಯಿಸಿ ಬಂದ ಸ್ನೇಹಿತ ಕೂಡಲೇ ಸಂಧ್ಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಆವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 ವರ್ಷಗಳಿಂದ ಕಾಯಿಲೆ:

ಇಸ್ರೋ ಸಂಸ್ಥೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಆಂಧ್ರಪ್ರದೇಶ ಮೂಲದ ರಾವ್ ನಿವೃತ್ತರಾಗಿದ್ದರು. ನಿವೃತ್ತಿ ನಂತರ ಬೊಮ್ಮನಹಳ್ಳಿ ಸಮೀಪದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ಸಂಧ್ಯಾ ಜತೆ ವಾಸವಾಗಿದ್ದರು. ಅಮೆರಿಕದ ನ್ಯೂಜೆರ್ಸಿಯಲ್ಲಿ ಅವರ ಏಕೈಕ ಪುತ್ರಿ ನೆಲೆಸಿದ್ದಾರೆ. ಕಳೆದ 10 ವರ್ಷಗಳಿಂದ ಮಾನಸಿಕ ಕಾಯಿಲೆ ಸ್ಕಿಜೋಫ್ರೇನಿಯಾದಿಂದ (Schizophrenia) ರಾವ್ ಬಳಲುತ್ತಿದ್ದರು. ಈ ಕಾಯಿಲೆಗೆ ಅವರು ಚಿಕಿತ್ಸೆ ಪಡೆದರೂ ಗುಣಮುಖರಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

-ಬಾಕ್ಸ್‌-4 ದಿನಗಳಿಂದ ಮಾತ್ರೆ ಇಲ್ಲ

ನಾಲ್ಕು ದಿನಗಳಿಂದ ಮೃತ ರಾವ್ ಅವರು ಮಾತ್ರೆ ಪಡೆದಿರಲಿಲ್ಲ. ಇದರಿಂದ ಮಾನಸಿಕ ಸ್ಥಿತಿ ಮೇಲೆ ದುಷ್ಪರಿಣಾಮ ಬೀರಿದೆ. ಹೀಗಾಗಿ ಆತ್ಮಹತ್ಯೆ ಹಾಗೂ ಕೊಲೆ ಕೃತ್ಯ ಎಸಗುವ ಪ್ರಚೋದನೆಗೊಳಗಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಫೈವ್ ಸ್ಟಾರ್ ಸೌಲಭ್ಯ

ರಾವ್ ನೆಲೆಸಿರುವ ಅಪಾರ್ಟ್‌ಮೆಂಟ್‌ನಲ್ಲಿ ಐಷಾರಾಮಿ ಸೌಲಭ್ಯವಿತ್ತು. ವೈದ್ಯಕೀಯ, ಮನೆ ಸಹಾಯಕರು ಸೇರಿ ಫೈವ್ ಸ್ಟಾರ್ ಸೌಕರ್ಯ ಹೊಂದಿದ್ದರು. ಹೀಗಿದ್ದರೂ ರಾವ್ ಅವರಿಗೆ ಅಭದ್ರತೆ ಕಾಡಿತ್ತು ಎಂದು ಪೊಲೀಸರು ಹೇಳಿದ್ದಾರೆ.