ಬೆಂಗಳೂರಲ್ಲಿ ಮೊಬೈಲ್‌ ಕದ್ದು ಹಳ್ಳೀಲಿ ಮಾರುತ್ತಿದ್ದ ಎಂಜನಿಯರಿಂಗ್ ಪದವೀಧರ!

KannadaprabhaNewsNetwork |  
Published : Feb 28, 2024, 02:35 AM ISTUpdated : Feb 28, 2024, 08:59 AM IST
Mahadevapura 1 | Kannada Prabha

ಸಾರಾಂಶ

ರಾಜಧಾನಿಯ ರಸ್ತೆಗಳಲ್ಲಿ ಒಂಟಿಯಾಗಿ ಸಂಚರಿಸುವ ಜನರಿಂದ ಮೊಬೈಲ್ ಕದ್ದು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ ಎಂಜನಿಯರಿಂಗ್ ಪದವೀಧರ ಹಾಗೂ ಆತನ ಸಂಬಂಧಿಯನ್ನು ಮಹದೇವಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯ ರಸ್ತೆಗಳಲ್ಲಿ ಒಂಟಿಯಾಗಿ ಸಂಚರಿಸುವ ಜನರಿಂದ ಮೊಬೈಲ್ ಕದ್ದು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ ಎಂಜನಿಯರಿಂಗ್ ಪದವೀಧರ ಹಾಗೂ ಆತನ ಸಂಬಂಧಿಯನ್ನು ಮಹದೇವಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಎಚ್‌.ಕೆ.ರಂಗನಾಥ್ ಹಾಗೂ ಗಿರೀಶ್ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ ವಿವಿಧ ಕಂಪನಿಗಳ 20 ಲಕ್ಷ ರು ಮೌಲ್ಯದ 68 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚಿಗೆ ಸೀತಾರಾಮಪಾಳ್ಯ ಮೆಟ್ರೋ ನಿಲ್ದಾಣ ಹತ್ತಿರ ಸಾಫ್ಟ್‌ವೇರ್‌ ಉದ್ಯೋಗಿ ಅಬ್ದುಲ್‌ ಇರ್ಫಾನ್‌ ಅವರಿಂದ ಮೊಬೈಲ್ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದರು.

ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಇನ್ಸ್‌ಪೆಕ್ಟರ್ ಜಿ.ಪ್ರವೀಣ್ ಬಾಬು ನೇತೃತ್ವದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಪರಶುರಾಮ್ ಮತ್ತು ಸಿಬ್ಬಂದಿ, ತಾಂತ್ರಿಕ ಮಾಹಿತಿ ಆಧರಿಸಿ ಮೊಬೈಲ್‌ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅಟ್ಟಿದ್ದಾರೆ.

ಕಳ್ಳನಾದ ಇ ಪದವೀಧರ: ಹಿರಿಯೂರು ತಾಲೂಕಿನ ರಂಗನಾಥ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 

ಕಾಡುಗೋಡಿ ಠಾಣೆಯಲ್ಲಿ ಆತನ ಮೇಲೆ ಎಂಓಬಿ ಕಾರ್ಡ್ ತೆರೆಯಲಾಗಿದೆ. ಮತ್ತೊಬ್ಬ ಆರೋಪಿ ಬಿಇ ಎಲೆಕ್ಟ್ರಿಕಲ್‌ ಓದಿದ್ದ ಗಿರೀಶ್‌, ಸುಲಭವಾಗಿ ಹಣ ಸಂಪಾದನೆಗೆ ತನ್ನ ಸೋದರ ಸಂಬಂಧಿ ರಂಗನಾಥ್ ಜತೆ ಮೊಬೈಲ್ ಕಳ್ಳತನಕ್ಕಿಳಿದಿದ್ದನು.

ಕೆಲ ದಿನಗಳಿಂದ ಕೆ.ಆರ್‌.ಪುರದ ಟಿನ್‌ ಪ್ಯಾಕ್ಟರಿ, ಮಾರತ್ತಹಳ್ಳಿ, ಹೆಬ್ಬಾಳ, ಸಿಲ್ಕ್ ಬೋರ್ಡ್‌ ಸೇರಿದಂತೆ ಜನನಿಬಿಡ ಪ್ರದೇಶಗಳು ಮಾತ್ರವಲ್ಲದೆ ನಿರ್ಜನ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವ ನಾಗರಿಕರ ಮೊಬೈಲ್ ದೋಚುತ್ತಿದ್ದರು. 

ಕಳವು ಮಾಡಿದ ಮೊಬೈಲ್‌ಗಳನ್ನು ತಮ್ಮೂರಿನ ಕಡೆ ರೈತರಿಗೆ ಸೆಕೆಂಡ್ ಹ್ಯಾಂಡ್‌ನಲ್ಲಿ ತಂದಿರುವುದಾಗಿ ನಂಬಿಸಿ ಇಬ್ಬರು ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸೆಲ್ಫಿ ವಿಡಿಯೋದಲ್ಲಿ ಸಿಕ್ಕಿಬಿದ್ದ! 
ಇತ್ತೀಚಿಗೆ ಮಹದೇವಪುರ ಸಮೀಪ ಸಾಫ್ಟ್‌ವೇರ್ ಉದ್ಯೋಗಿಯಿಂದ ಆರೋಪಿಗಳು ಮೊಬೈಲ್ ಎಗರಿಸಿದ್ದರು. ಆದರೆ ಈ ಕಳ್ಳತನದ ನಡೆದ ವೇಳೆ ತನ್ನ ಪ್ರಿಯತಮೆ ಜತೆ ವಿಡಿಯೋ ಕಾಲ್‌ನಲ್ಲಿ ಟೆಕಿ ಇದ್ದರು. 

ಹಾಗಾಗಿ ಕಳ್ಳತವಾದ ಕೂಡಲೇ ಆತನ ಅಸ್ಪಷ್ಟ ಮುಖಚಹರೆಯು ಟೆಕಿ ಪ್ರಿಯತಮೆ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿತ್ತು. ಇನ್ನು ಮೊಬೈಲ್ ಕಳ್ಳನನ್ನು ತಾನು ಗುರುತಿಸುವುದಾಗಿ ಸಹ ದೂರಿನಲ್ಲಿ ಟೆಕಿ ಹೇಳಿದ್ದರು. 

ಈ ಮಾಹಿತಿ ಆಧರಿಸಿ ತನಿಖೆಗಿಳಿದ ಪೊಲೀಸರು, ಮತ್ತಷ್ಟು ತಾಂತ್ರಿಕತೆ ಬಳಸಿ ಅಸ್ಪಷ್ಟ ಮುಖಚಹರೆಯಲ್ಲಿ ಮೂಗಿನ ಚಿತ್ರವನ್ನು ಡೆವಲಪ್‌ ಮಾಡಿ ಹಳೇ ಎಂಓಬಿಗಳ ಭಾವಚಿತ್ರಗಳಿಗೆ ಜೋಡಿಸಿ ನೋಡಿದರು. 

ಆಗ ರಂಗನಾಥ್‌ ಮುಖಕ್ಕೂ ಆ ಚಿತ್ರದ ಮೂಗಿಗೂ ಹೊಂದಾಣಿಕೆ ಕಂಡು ಬಂದಿತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV

Recommended Stories

24 ಕ್ಯಾರೆಟ್ ಶುದ್ಧ ಚಿನ್ನದ ಹೆಸರಲ್ಲಿ ಟೋಪಿ ಹಾಕಿದವ ಬಂಧನ : 30 ಲಕ್ಷ ರು. ಮೌಲ್ಯದ ವಸ್ತು ಜಪ್ತಿ
ಮಾದಕವಸ್ತು ಮಾರಾಟ ದಂಧೆಯಲ್ಲಿ ತೋಡಗಿದ್ದ ವಿದೇಶಿ ಮಹಿಳೆಯರಿಬ್ಬರ ಬಂಧನ