ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾದಕ ವಸ್ತು ಸೇವನೆ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಗರದ 8 ಖಾಸಗಿ ಪದವಿ ಕಾಲೇಜುಗಳ ಸುಮಾರು ಒಂದು ಸಾವಿರ ಅಧಿಕ ವಿದ್ಯಾರ್ಥಿಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಬುಧವಾರ ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಿದ್ದಾರೆ.

ವಿಜಯನಗರ ಉಪ ವಿಭಾಗದ ವ್ಯಾಪ್ತಿಯ 8 ಕಾಲೇಜು ಹಾಗೂ 2 ಹಾಸ್ಟೆಲ್‌ಗಳಲ್ಲಿ ಡ್ರಗ್ಸ್ ಸೇವನೆ ಬಗ್ಗೆ ತಪಾಸಣೆ ನಡೆದಿದೆ. ಈ ವೇಳೆ ಕೆಲ ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ದೃಢಪಟ್ಟಿದ್ದು, ಆ ವಿದ್ಯಾರ್ಥಿಗಳಲ್ಲಿ ವ್ಯಸನ ಮುಕ್ತಕ್ಕೆ ಸನ್ಮಿತ್ರ ಕಾರ್ಯಕ್ರಮದಡಿ ಪೋಷಕರಿಗೆ ಪೊಲೀಸರು ನೆರವು ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾದಕ ವಸ್ತು ಮಾರಾಟ ಜಾಲ ಶೈಕ್ಷಣಿಕ ವಲಯಕ್ಕೆ ಹರಡುತ್ತಿದೆ. ಇತ್ತೀಚಿಗೆ ಡ್ರಗ್ಸ್ ಪ್ರಕರಣಗಳಲ್ಲಿ ಬಂಧಿತ ಪೆಡ್ಲರ್‌ಗಳ ವಿಚಾರಣೆ ವೇಳೆ ಡ್ರಗ್ಸ್ ಮಾಫಿಯಾದ ಪ್ರಮುಖ ಗ್ರಾಹಕರೇ ವಿದ್ಯಾರ್ಥಿಗಳಾಗಿದ್ದಾರೆ ಎಂಬ ಆತಂಕದ ಸಂಗತಿ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು, ಕಾಲೇಜು ಕಾರಿಡಾರ್‌ಗಳಿಗೆ ಹರಡಿರುವ ಡ್ರಗ್ಸ್ ಮಾರಾಟ ಜಾಲದ ಬೇರು ಕತ್ತರಿಸಲು ಮುಂದಾಗಿದ್ದಾರೆ.

ಇದರ ಭಾಗವಾಗಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ತಪಾಸಣೆ ನಡೆಸಲು ವಿಜಯನಗರ ಉಪ ವಿಭಾಗದ ಪೊಲೀಸರು ನಿರ್ಥರಿಸಿದರು. ಈ ಕಾರ್ಯಕ್ರಮಕ್ಕೆ ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ಪುಣ್ಯ, ಲಕ್ಷ್ಮೀ ಹಾಗೂ ಶ್ರೇಯಾ ಸೇರಿದಂತೆ ಆರು ಆಸ್ಪತ್ರೆಗಳು ಕೈ ಜೋಡಿಸಿವೆ. ಡ್ರಗ್ಸ್ ಸೇವನೆ ದುಷ್ಪರಿಣಾಮ ಬಗ್ಗೆ ಕಾಲೇಜುಗಳ ಆಡಳಿತ ಮಂಡಳಿಗೆ ಪೊಲೀಸರು ಮನವರಿಕೆ ಮಾಡಿಕೊಟ್ಟರು. ಬಳಿಕ ತಮ್ಮ ಕಾಲೇಜುಗಳಲ್ಲಿ ಡ್ರಗ್ಸ್ ತಪಾಸಣೆಗೆ ಆಡಳಿತ ಮಂಡಳಿಗಳು ಸಹ ಸಮ್ಮತಿಸಿವೆ.


ಹೇಗೆ ಕಾರ್ಯಕ್ರಮ?:

ವಿಜಯನಗರ ವ್ಯಾಪ್ತಿಯ 8 ಪದವಿ ಕಾಲೇಜುಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸಹಕಾರದಲ್ಲಿ ಡ್ರಗ್ಸ್ ತಪಾಸಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾಲೇಜಿನಲ್ಲಿ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಸ್ಯಾಂಪಲ್ಸ್ ಸಂಗ್ರಹಿಸಲಾಯಿತು. ಆ ಸ್ಯಾಂಪಲ್ಸ್ ಪರೀಕ್ಷಿಸಿದಾಗ ಅರ್ಧದಷ್ಟು ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ಲಕ್ಷಣದ ಶಂಕೆ ಮೂಡಿತು. ಬಳಿಕ ಆ ವಿದ್ಯಾರ್ಥಿಗಳನ್ನು ಮತ್ತೆ ಪರೀಕ್ಷೆಗೊಳಪಡಿಸಿದಾಗ ಬೆರಣಿಕೆಯಷ್ಟು ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.

ವ್ಯಸನಿಗಳಿಗೆ ‘ಖಾಕಿ’ ಸನ್ಮಿತ್ರ:

ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಚಟ ಮುಕ್ತಗೊಳಿಸಲು ‘ಸನ್ಮಿತ್ರ’ ಹೆಸರಿನ ಯೋಜನೆಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಜಾರಿಗೊಳಿಸಿದ್ದಾರೆ. ಈ ಕಾರ್ಯಕ್ರಮದ ಮೂಲಕ ಡ್ರಗ್ಸ್ ವ್ಯಸನಿ ವಿದ್ಯಾರ್ಥಿಗಳಿಗೆ ಪೊಲೀಸರು ನೆರವು ಸಿಗಲಿದೆ. ಆ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ ಒಳಪಡಿಸಿ ಯಾವ ಕಾರಣಕ್ಕೆ ಆತ ಡ್ರಗ್ಸ್‌ಗೆ ದಾಸನಾದ ಎಂದು ತಿಳಿಯಲಾಗುತ್ತದೆ. ಆನಂತರ ಆ ವಿದ್ಯಾರ್ಥಿ ಪೋಷಕರ ಜತೆ ಸಮಾಲೋಚಿಸಿ ಡ್ರಗ್ಸ್ ಸೇವನೆಯಿಂದ ಆತನನ್ನು ದೂರವಾಗಿಸಲು ಪ್ರಯತ್ನಿಸಲಾಗುತ್ತದೆ. ಈ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ಪೊಲೀಸರು ನಿಗಾವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.