ನಿಗೂಢವಾಗಿ ನಾಪತ್ತೆಯಾಗಿದ್ದ ಕಸುವಿನಹಳ್ಳಿ ಗ್ರಾಮದ ವೃದ್ಧೆ ಶವವಾಗಿ ಪತ್ತೆ

KannadaprabhaNewsNetwork |  
Published : May 31, 2026, 01:15 AM IST
55 | Kannada Prabha

ಸಾರಾಂಶ

ನಿಗೂಢವಾಗಿ ನಾಪತ್ತೆಯಾಗಿದ್ದ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದ ವೃದ್ಧೆಯ ಶವ ಪತ್ತೆಯಾಗಿದೆ. ಗ್ರಾಮದ ಜಮೀನೊಂದರ ಇಂಗು ಗುಂಡಿಯಲ್ಲಿ ಮೃತ ದೇಹ ಸಿಕ್ಕಿದ್ದು ಚಿನ್ನಾಭರಣಕ್ಕಾಗಿ ಸ್ಥಳೀಯನೋರ್ವ ಕೊಲೆ ಮಾಡಿದ್ದು, ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ನಿಗೂಢವಾಗಿ ನಾಪತ್ತೆಯಾಗಿದ್ದ ತಾಲೂಕಿನ ಕಸುವಿನಹಳ್ಳಿ ಗ್ರಾಮದ ವೃದ್ಧೆಯ ಶವ ಪತ್ತೆಯಾಗಿದೆ. ಗ್ರಾಮದ ಜಮೀನೊಂದರ ಇಂಗು ಗುಂಡಿಯಲ್ಲಿ ಮೃತ ದೇಹ ಸಿಕ್ಕಿದ್ದು ಚಿನ್ನಾಭರಣಕ್ಕಾಗಿ ಸ್ಥಳೀಯನೋರ್ವ ಕೊಲೆ ಮಾಡಿದ್ದು, ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕಸುವಿನಹಳ್ಳಿ ಗ್ರಾಮದ ಶಿವರುದ್ರಮ್ಮ (63) ನಾಲ್ಕು ದಿನಗಳ ಹಿಂದೆ ಮನೆಯಿಂದ ತೆರಳಿದ್ದವರು ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಅನುಮನಾಸ್ಪದವಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಶಿವರುದ್ರಮ್ಮ ಅವರನ್ನ ಪತ್ತೆ ಹಚ್ಚುವ ಕಾರ್ಯಾಚರಣೆ ಆರಂಭಿಸಿದಾಗ ಕಸುವಿನಹಳ್ಳಿ ಗ್ರಾಮದ ಜಮೀನೊಂದರ ಇಂಗು ಗುಂಡಿಯೊಂದರಲ್ಲಿ ಮಹಿಳೆಯ ಮೃತದೇಹವನ್ನ ಹಾಕಿ ಕಲ್ಲು ಮಣ್ಣಿನಿಂದ ಅರೆಬರೆ ಮುಚ್ಚಿರುವ ದೃಶ್ಯ ಪೊಲೀಸರಿಗೆ ಕಂಡು ಬಂದಿದೆ. ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ತನಿಖೆ ಆರಂಭಿಸಿದಾಗ ನಿಗೂಢ ಕೊಲೆ ರಹಸ್ಯ ಬಯಲಾಗಿದ್ದು, ಗ್ರಾಮದ ನಿವಾಸಿ ಮಹದೇವಪ್ಪ ಎಂಬಾತನನ್ನ ಬಂಧಿಸಿದ್ದಾರೆ.

ಪೂಜೆ ಬಿಲ್ವಪತ್ರೆ ಕೀಳಲು ಹೋದ ವೃದ್ಧೆ:

ಮೃತ ಶಿವರುದ್ರಮ್ಮ ಮೈಮೇಲೆ ಸುಮಾರು 70 ಗ್ರಾಂ ಚಿನ್ನಾಭರಣ ಧರಿಸಿದ್ದರು ಎನ್ನಲಾಗಿದ್ದು, ಅವರು ಮಹಾಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸುವ ಉದ್ದೇಶದಿಂದ ಬಿಲ್ವಪತ್ರೆ ಕೀಳಲೆಂದು ಹೊರ ವಲಯದಲ್ಲಿರುವ ದೇವಾಲಯದ ಸಮೀಪಕ್ಕೆ ಆಗಮಿಸಿದ್ದರು. ಈ ಸಂದರ್ಭ ಸಮೀಪದ ಜಮೀನಿನಲ್ಲಿದ್ದ ಮಹದೇವಪ್ಪನನ್ನು ನೋಡಿ ಬಿಲ್ವಪತ್ರೆ ಕಿತ್ತುಕೊಡಲು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಮಹದೇವಪ್ಪ ಬಿಲ್ವಪತ್ರೆ ಕಿತ್ತುಕೊಡುವ ವೇಳೆ ವೃದ್ಧ ಮಹಿಳೆಯ ಮೈಮೇಲಿನ ಚಿನ್ನಾಭರಣಗಳನ್ನು ಗಮನಿಸಿ ಅವುಗಳನ್ನು ಲಪಟಾಯಿಸಲು ಆಲೋಚಿಸಿ, ತಾನು ಕೆಲಸ ಮಾಡುತ್ತಿರುವ ತೋಟದಲ್ಲಿ ಗಂಧದ ಮರದ ಪತ್ರೆಗಳಿದ್ದು, ಅವುಗಳನ್ನೂ ಸಹಾ ಪೂಜೆಗೆ ಕಿತ್ತುಕೊಡುವುದಾಗಿ ಅವರನ್ನು ಮನವೊಲಿಸಿ ಸಮೀಪದಲ್ಲೇ ತಾನು ಕೆಲಸ ನಿರ್ವಹಿಸುತ್ತಿದ್ದ ಜಮೀನಿಗೆ ಕರೆದೊಯ್ದು, ಗಂಧದ ಮರದ ಬಳಿ ಇದ್ದ ಇಂಗುಗುಂಡಿಗೆ ತಳ್ಳಿ ಕೆಳಕ್ಕೆ ಬೀಳಿಸಿ, ಬಳಿಕ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಕೃತಕ ಚಿರತೆ ಹೆಜ್ಜೆ ಗುರುತು:

ನಂತರ ಮಹಿಳೆಯ ಮೈಮೇಲಿನ ಚಿನ್ನಾಭರಣಗಳನ್ನು ಕಿತ್ತುಕೊಂಡು ಮೃತ ದೇಹದ ಮೇಲೆ ಮಣ್ಣು ಮುಚ್ಚಿದ್ದಾನೆ. ಬಳಿಕ ಮಹಿಳೆಯ ಚಪ್ಪಲಿ ಹಾಗೂ ಅವರ ಕೈಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿ ಮೃತ ಶಿವರುದ್ರಮ್ಮನವರ ಜಮೀನಿನಲ್ಲಿ ಎಸೆದು ಚಿರತೆ ಹೆಜ್ಜೆ ಗುರುತನ್ನು ಕೃತಕವಾಗಿ ಮೂಡಿಸಿದ್ದಾನೆ. ಇನ್ನು ಮೃತ ಮಹಿಳೆಯ ಪತಿ ಗುರುಸ್ವಾಮಪ್ಪ ತನ್ನ ಪತ್ನಿ ಕಾಣೆಯಾಗಿರುವ ಬಗ್ಗೆ ಪೊಲಿಸರಿಗೆ ದೂರು ನೀಡಿ ಬಳಿಕ ಗ್ರಾಮದಲ್ಲಿ ಹುಡುಕಾಟ ನಡೆಸುತ್ತಿದ್ದ ವೇಳೆ ಸಹಾ ಈತ ಗ್ರಾಮಸ್ಥರ ಜೊತೆಯಲ್ಲಿಯೇ ಇದ್ದು, ಊರಿನಲ್ಲಿ ಚಿರತೆ ಕಾಟವಿದ್ದು, ವನ್ಯಮೃಗದ ದಾಳಿಯಾಗಿರಬಹುದು ಎಂದು ಹುಡುಕಾಟ ನಡೆಸುತ್ತಿದ್ದವರಿಗೆ ತಿಳಿಸುವ ಮೂಲಕ ಕೊಲೆ ಪ್ರಕರಣ ಮುಚ್ಚಿಹಾಕಲು ಮುಂದಾಗಿದ್ದಾನೆ.

ಆದರೆ, ಪೊಲೀಸರು ಸಂಶಯಗೊಂಡು ಮಹದೇವಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಕೊಲೆ ಮಾಡಿರುವ ಕೃತ್ಯವನ್ನು ಒಪ್ಪಿಕೊಂಡು ಮೃತದೇಹವನ್ನು ಹೂಳಿದ್ದ ಸ್ಥಳವನ್ನು ತೋರಿಸಿಕೊಟ್ಟಿದ್ದಾನೆ, ಇನ್ನು ಕೈ ಸಾಲ ಹೆಚ್ಚಾಗಿದ್ದರಿಂದ ಚಿನ್ನಾಭರಣವನ್ನು ದೋಚಿ ಸಾಲ ತೀರಿಸುವ ಉದ್ದೇಶದಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಡೇಟಿಂಗ್‌ ಆ್ಯಪಲ್ಲಿ ಚೆಲುವೆ ಬಲೆಗೆ ಬಿದ್ದ ಟೆಕ್ಕಿಗೆ ₹1.6 ಕೋಟಿ ವಂಚನೆ
ಡಗ್ಸ್‌ ಕೇಸಲ್ಲಿ ನೈಜೀರಿಯಾ ಪ್ರಜೆಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌