ಆನೇಕಲ್ : ಪತ್ನಿ ಕೊಂದು ಚರಂಡಿಗೆಸೆದು 3ನೇ ಮದುವೆ ಆಗುತ್ತಿದ್ದ ಬಿಹಾರ ಮೂಲದ ಪತಿ ಬಂಧನ

ಸಾರಾಂಶ

ಸರ್ಜಾಪುರದಲ್ಲಿ ಇತ್ತೀಚೆಗೆ ನಡೆದಿದ್ದ ಅಪರಿಚಿತ ಮಹಿಳೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆಕೆಯ ಪತಿಯನ್ನು ಬಂಧಿಸಿದ್ದಾರೆ.

ಆನೇಕಲ್ : ಸರ್ಜಾಪುರದಲ್ಲಿ ಇತ್ತೀಚೆಗೆ ನಡೆದಿದ್ದ ಅಪರಿಚಿತ ಮಹಿಳೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆಕೆಯ ಪತಿಯನ್ನು ಬಂಧಿಸಿದ್ದಾರೆ.

ಬಿಹಾರ ಮೂಲದ ಮಹಮದ್ ನಸೀಮ್(39) ಬಂಧಿತ, ಬಿಹಾರ ಮೂಲದ ರುಮೇಶ್ ಖಾತುನ್(22) ಕೊಲೆಯಾದ ಮಹಿಳೆ. ನಸೀಮ್‌ಗೆ ರುಮೇಶ್‌ 2ನೇ ಪತ್ನಿ. ಆತ ಸರ್ಜಾಪುರದಲ್ಲಿ ಪೈಂಟರ್‌ ಕೆಲಸ ಮಾಡುತ್ತಿದ್ದ. ಮೊದಲ ಪತ್ನಿಗೆ ಮೂವರು ಮಕ್ಕಳು, ಎರಡನೇ ಪತ್ನಿಗೆ ಮೂವರು ಮಕ್ಕಳಿದ್ದರು. ದಂಪತಿ ಜೊತೆಗೆ ಮೊದಲ ಪತ್ನಿಯ ಮೂವರು, ಎರಡನೇ ಪತ್ನಿಯ ಒಬ್ಬ ಮಗ ಮಾತ್ರ ಇದ್ದರು. ಪತ್ನಿಯ ಶೀಲ ಶಂಕಿಸಿ ಪದೇ ಪದೇ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ. ನಸೀಮ್ ನ.11ರಂದು ಹೆಂಡತಿಯ ಜೊತೆ ಜಗಳ ಮಾಡಿ ಗಲಾಟೆ ವಿಕೋಪಕ್ಕೆ ತಿರುಗಿದಾಗ ಉಸಿರುಗಟ್ಟಿಸಿ, ಹಗ್ಗದಿಂದ ಕೈ ಕಾಲು ಕಟ್ಟಿ ಪತ್ನಿಯನ್ನು ಕೊಂದು ವಿವಸ್ತ್ರಗೊಳಿಸಿ ಚರಂಡಿಗೆ ಎಸೆದಿದ್ದ. ಬಳಿಕ ನಾಲ್ವರು ಮಕ್ಕಳನ್ನು ಕರೆದುಕೊಂಡು ಬಿಹಾರದಲ್ಲಿ ತಲೆ ಮರೆಸಿಕೊಂಡಿದ್ದ.

ಶವ ಕೊಳೆತು ದುರ್ವಾಸನೆ ಬಂದಾಗ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಪರಿಚಿತ ಮಹಿಳೆ ಕೊಲೆ ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ತನಿಖೆ ಮುಂದುವರಿಸಿದ್ದರು. ಆರೋಪಿ ಜಾಡು ಹಿಡಿದು ಬಿಹಾರಕ್ಕೆ ತೆರಳಿದಾಗ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಮೂರನೇ ಮದುವೆ ಸಂಭ್ರಮದಲ್ಲಿದ್ದ ಆರೋಪಿಯನ್ನು ಮದುವೆ ಮನೆಯಲ್ಲಿಯೇ ಬಂಧಿಸಿ ಸರ್ಜಾಪುರಕ್ಕೆ ಕರೆತಂದು ಪೊಲೀಸ್ ಭಾಷೆ ರೀತಿ ರಿವಾಜಿನಲ್ಲಿ ತೀವ್ರ ವಿಚಾರಣೆ ನಡೆಸಿದಾಗ ತಾನೇ ಕೊಂದಿರುವುದಾಗಿ ತಿಳಿಸಿದ್ದಾನೆ.

Share this article