ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ಮತ್ತೊಂದು ವಿದ್ಯಾ ಸಂಸ್ಥೆಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಯಶವಂತಪುರದ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ಆವರಣದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಕಿಡಿಗೇಡಿಗಳು ಬಾಂಬ್ ಇರಿಸಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ.
ಜ.28ರಂದು ಬೆಳಗ್ಗೆ 7.37ಕ್ಕೆ ಕೇಂದ್ರೀಯ ವಿದ್ಯಾಲಯದ ಅಧಿಕೃತ ಇ-ಮೇಲ್ principal.kviisc@gmail.com ಗೆ sahukarisrinivasarao65@gmail.com ಎಂಬ ಇ-ಮೇಲ್‌ನಿಂದ ‘ನಿಮ್ಮ ಶಾಲೆಯಲ್ಲಿ ಒಂದು ಬಾಂಬ್ ಇದ್ದು, ನಾಳೆ 10.20ಕ್ಕೆ ಸಿಡಿಯಲಿದೆ’ ಎಂಬ ಬೆದರಿಕೆ ಸಂದೇಶ ಬಂದಿದೆ.
ವಿದ್ಯಾಲಯದ ಪ್ರಾಂಶುಪಾಲರಾದ ಎನ್.ವೈ.ಅಮೃತಬಾಲ ಅವರು ಈ ಬೆದರಿಕೆ ಇ-ಮೇಲ್ ನೋಡಿದ ಬಳಿಕ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಂದು ಭಾನುವಾರ ರಜೆ ಇದ್ದ ಕಾರಣ ಶಾಲೆಗೆ ಮಕ್ಕಳು ಬಂದಿರಲಿಲ್ಲ. ತಕ್ಷಣ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಪೊಲೀಸರು, ಕೇಂದ್ರೀಯ ವಿದ್ಯಾಲಯಕ್ಕೆ ತೆರಳಿ ತಪಾಸಣೆ ನಡೆಸಿದ್ದಾರೆ.
ಆದರೆ, ಎಲ್ಲಿಯೂ ಬಾಂಬ್ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಎಂಬುದು ಖಚಿತವಾಗಿದೆ.
ಯಶವಂತಪುರ ಠಾಣೆ ಪೊಲೀಸರು. ಈ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿರುವ ಕಿಡಿಗೇಡಿ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಈ ಇ-ಮೇಲ್ ವಿಳಾಸದ ಜಾಡು ಹಿಡಿಯಲು ಸೈಬರ್ ಕ್ರೈಂ ತಜ್ಞರ ಸಹಕಾರ ಕೋರಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಕಿಡಿಗೇಡಿಗಳು ನಗರದ 50ಕ್ಕೂ ಅಧಿಕ ಶಾಲೆಗಳ ಇ-ಮೇಲ್‌ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.