ಮೋಜು - ಮಸ್ತಿಗೆ ಸುಲಭವಾಗಿ ಹಣ ಗಳಿಸಲು ಮಹಿಳೆಯರ ಸರ ಕಳವು ಮಾಡುತ್ತಿದ್ದ ಪದವೀಧರನ ಬಂಧನ

KannadaprabhaNewsNetwork |  
Published : Sep 28, 2024, 01:21 AM ISTUpdated : Sep 28, 2024, 04:31 AM IST
man-arrested-for-removing-condom-secretly-while-having-sex

ಸಾರಾಂಶ

ಮೋಜು-ಮಸ್ತಿಗೆ ಸುಲಭವಾಗಿ ಹಣ ಗಳಿಸಲು ಮಹಿಳೆಯರ ಸರ ಕಳವು ಮಾಡುತ್ತಿದ್ದ ಬಿ.ಕಾಂ ಪದವೀಧರನನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಮೋಜು-ಮಸ್ತಿಗೆ ಸುಲಭವಾಗಿ ಹಣ ಗಳಿಸಲು ಮಹಿಳೆಯರ ಸರ ಕಳವು ಮಾಡುತ್ತಿದ್ದ ಬಿ.ಕಾಂ ಪದವೀಧರನನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇಮ್ಮಡಿಹಳ್ಳಿ ನಿವಾಸಿ ವಿನಯ್‌ ಕುಮಾರ್‌(22) ಬಂಧಿತ. ಆರೋಪಿಯಿಂದ ₹5 ಲಕ್ಷ ಮೌಲ್ಯದ 77 ಗ್ರಾಂ ತೂಕದ ಎರಡು ಚಿನ್ನದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವೈಟ್‌ಫೀಲ್ಡ್‌ ಸಮೀಪದ ವಿನಾಯಕನಗರದ ಚಿಲ್ಲರೆ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದಿದ್ದ ಅಪರಿಚಿತ ಸಕ್ಕರೆ ತೂಕ ಮಾಡುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲಾದ ಬೆನ್ನಲ್ಲೇ ತನಿಖೆಗಿಳಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಭಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ವೈಟ್‌ಫೀಲ್ಡ್‌ನ ಹಗದೂರು ಮುಖ್ಯರಸ್ತೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ಮಾಡಿದಾಗ ಸರಗಳವು ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.ಎರಡು ಪ್ರಕರಣ ಪತ್ತೆ:

ಆರೋಪಿಯ ಬಂಧನದಿಂದ ಹನುಮಂತನಗರ ಹಾಗೂ ವೈಟ್‌ಫೀಲ್ಡ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ತಲಾ ಒಂದು ಸರಗಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 77 ಗ್ರಾಂ ತೂಕದ ಎರಡು ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಡಿಟ್‌ ಅಫೀಸ್‌ನಲ್ಲಿ ಕೆಲಸ:  ಆಂಧ್ರಪ್ರದೇಶದ ತಿರುಪತಿ ಮೂಲದ ಆರೋಪಿ ವಿನಯ್‌ ಕುಮಾರ್‌ ಬಿಕಾಂ ಪದವೀಧರ. ಕಳೆದ ಒಂದು ವರ್ಷದಿಂದ ವೈಟ್‌ಫೀಲ್ಡ್‌ ಸಮೀಪದ ಇಮ್ಮಡಿಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಖಾಸಗಿ ಆಡಿಟ್‌ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಶೋಕಿಲಾಲನಾದ ಈತನಿಗೆ ಸಂಬಳ ಸಾಲುತ್ತಿರಲಿಲ್ಲ. ಹೀಗಾಗಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳವು ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

PREV

Recommended Stories

ಮನೆಗಳ ಬೀಗ ಮುರಿದು ನಗ-ನಾಣ್ಯ ದೋಚುತ್ತಿದ್ದ ಮೂವರ ಬಂಧನ
ಬೆಂಗಳೂರಿನ ಸಿಂಧಿ ಶಾಲೆಯಲ್ಲಿ ಕನ್ನಡ ಮಾತಾಡಿದರೆ ದಂಡ: ಶಿಕ್ಷಣ ಇಲಾಖೆ ವಿಚಾರಣೆಯಲ್ಲಿ ದೃಢ