ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತ ಯುವತಿಯೊಬ್ಬಳು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಮಂಡ್ಯ ನಗರದ ಹೊರವಲಯದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತ ಯುವತಿಯೊಬ್ಬಳು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.

ಆಂಧ್ರ ಮೂಲದ ದಿವ್ಯಾ (೨೬) ಮೃತಪಟ್ಟ ದುರ್ದೈವಿ. ದಿನೇಶ್, ತೇಜು, ಪ್ರಿಯಾಂಕ ಹಾಗೂ ಚಾಲಕ ಸಿದ್ದಿಕ್ ಎಂಬುವರು ಗಾಯಗೊಂಡಿದ್ದಾರೆ. ದಿನೇಶ್ ಮತ್ತು ದಿವ್ಯಾ ದಂಪತಿ ಕುಟುಂಬ ಸಹಿತ ಬೆಂಗಳೂರಿನಿಂದ ಮೈಸೂರು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ನಗರದ ಹೊರವಲಯಕ್ಕೆ ಬರುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗಾಯಗೊಂಡವರನ್ನು ತಕ್ಷಣ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಕಾರಿನೊಳಗಿದ್ದ ಆರು ಜನರ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ದಿವ್ಯಾ ಅಸುನೀಗಿದರು. ನಂತರ ಉಳಿದವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು ಡಿಕ್ಕಿ: ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

ನಾಗಮಂಗಲ:

ಕಾರು- ಸ್ಕೂಟರ್ ನಡುವೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಸಾಮಕಹಳ್ಳಿ ಬಳಿ ಶನಿವಾರ ಸಂಜೆ ಸಂಭವಿಸಿದೆ.

ಪಾಂಡವಪುರ ತಾಲೂಕು ಮೇಲುಕೋಟೆ ಹೋಬಳಿಯ ಕಾಳೇನಹಳ್ಳಿಯ ಚಿಕ್ಕಲಿಂಗಾಚಾರಿ ಪುತ್ರ ಕೆ.ಸಿ.ರಾಜೇಂದ್ರ (38) ಘಟನೆಯಲ್ಲಿ ಸಾವನ್ನಪ್ಪಿದ ಸ್ಕೂಟರ್ ಸವಾರ.

ಕಾರ್ಯನಿಮಿತ್ತ ತಮ್ಮ ಹೋಂಡಾ ಆಕ್ಟಿವಾ (ಕೆಎ11- ಇಜಿ3594) ಸ್ಕೂಟರ್ ನಲ್ಲಿ ನಾಗಮಂಗಲಕ್ಕೆ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಪಸ್ ತೆರಳುತ್ತಿದ್ದ ವೇಳೆ ಮೈಸೂರು ಕಡೆಯಿಂದ ಬೆಳ್ಳೂರಿಗೆ ತೆರಳುತ್ತಿದ್ದ (ಕೆಎ04 ಎಂಎಚ್ 4872) ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಸ್ಕೂಟರ್ ಜಖಂಗೊಂಡು ಕಾರು ಪಲ್ಟಿ ಹೊಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಬಿ.ರಾಜೇಂದ್ರ ಮತ್ತು ಪೊಲೀಸ್‌ ಸಿಬ್ಬಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ ಕೆ.ಸಿ.ರಾಜೇಂದ್ರ ಅವರ ಮೃತದೇಹವನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.

ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.