ಕುಟುಂಬಸ್ಥರಿದ್ದಾಗಲೇ ಮನೆ ದೋಚಿದ್ದವರ ಐವರ ಬಂಧನ

KannadaprabhaNewsNetwork |  
Published : Oct 23, 2024, 01:52 AM IST
1 | Kannada Prabha

ಸಾರಾಂಶ

ಕುಟುಂಬಸ್ಥರು ರಾತ್ರಿ ಮಲಗಿದ್ದಾಗ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಐವರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಟುಂಬದ ಸದಸ್ಯರು ರಾತ್ರಿ ನಿದ್ರೆಯಲ್ಲಿದ್ದಾಗಲೇ ಮನೆಗೆ ನುಗ್ಗಿ ಹಾಕಿ ಚಿನ್ನಾಭರಣ ದೋಚಿದ್ದ ಐವರು ಕಳ‍್ಳರು ಬೇಗೂರು ಠಾಣೆ ಪೊಲೀಸರ ಗಾಳಕ್ಕೆ ಸಿಲುಕಿ ಜೈಲು ಸೇರಿದ್ದಾರೆ.

ತಮಿಳುನಾಡು ರಾಜ್ಯದ ಧರ್ಮಪುರಿ ಮೂಲದ ಜೋಸೆಫ್‌, ಎಲೆಕ್ಟ್ರಾನಿಕ್ ಸಿಟಿಯ ಹೆಬಿಯೇಸರ್‌, ನಾಗನಾಥಪುರದ ಗುಣ, ಮಂಜುನಾಥ್‌ ಹಾಗೂ ಆನೇಕಲ್‌ನ ನವೀನ್ ಕುಮಾರ್ ಬಂಧಿತರು. ಆರೋಪಿಗಳಿಂದ 308 ಗ್ರಾಂ ಚಿನ್ನಾಭರಣ, ಮೂರು ಮೊಬೈಲ್‌ಗಳು ಹಾಗೂ 2 ದ್ವಿಚಕ್ರ ವಾಹನಗಳು ಸೇರಿದಂತೆ ₹22.86 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಗಾರ್ವೆಭಾವಿಪಾಳ್ಯದ ಐಟಿ ಉದ್ಯೋಗಿ ಸಚ್ಚಿದಾನಂದ್‌ ಕುಟುಂಬದವರು ಮನೆಯಲ್ಲಿದ್ದಾಗಲೇ ರಾತ್ರಿ ಕಳ್ಳತನವಾಗಿತ್ತು. ಖದೀಮರಿಗೆ ತಾವು ದೋಚಿದ್ದ ಮೊಬೈಲ್ ಕಂಟಕವಾಗಿದೆ. ಕದ್ದ ಮೊಬೈಲ್ ಸುಳಿವು ಆಧರಿಸಿ ಕಳ್ಳರ ತಂಡವನ್ನು ಇನ್‌ಸ್ಪೆಕ್ಟರ್ ಪಿ.ಎಸ್‌.ಕೃಷ್ಣಕುಮಾರ್ ನೇತೃತ್ವದ ತಂಡ ಬಂಧಿಸಿದೆ.

ಕಣ್ಣಿಗೆ ಬಿದ್ದ ಮನೆಗಳಲ್ಲಿ ಕಳ್ಳತನ:

ವೃತ್ತಿಪರ ಕ್ರಿಮಿನಲ್‌ಗಳಾಗಿರುವ ಈ ಐವರು ಬೆಂಗಳೂರು ಮಾತ್ರವಲ್ಲದೆ ಹೊರಜಿಲ್ಲೆಗಳಲ್ಲಿ ಕೂಡ ಇವರ ವಿರುದ್ಧ ಅಪರಾಧ ಪ್ರಕರಣಗಳಿವೆ. ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ್ದಾಗ ಪರಸ್ಪರ ಪರಿಚಿತರಾಗಿದ್ದ ಆರೋಪಿಗಳು, ಜೈಲಿನಿಂದ ಹೊರಬಂದ ನಂತರ ಗುಂಪು ರಚಿಸಿಕೊಂಡು ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬೀಗ ಹಾಕಿದ ಮನೆ ಕಣ್ಣಿಗೆ ಬಿದ್ದರೆ ಕೂಡಲೇ ಆರೋಪಿಗಳು ಬೀಗ ಮುರಿದು ಕೈಗೆ ಸಿಕ್ಕಿದ್ದನ್ನು ದೋಚುತ್ತಿದ್ದರು. ಆದರೆ ಗಾರ್ವೆಭಾವಿಳ್ಯದಲ್ಲಿ ಟೆಕ್ಕಿ ಸಚ್ಚಿದಾನಂದ್ ಮನೆ ಕಳ್ಳತನ ಮಾತ್ರ ವಿಭಿನ್ನವಾಗಿತ್ತು. ಮೂರು ಅಂತಸ್ತಿನ ಕಟ್ಟಡದ ಎರಡನೇ ಹಂತದಲ್ಲಿ ಟೆಕ್ಕಿ ಕುಟುಂಬ ನೆಲೆಸಿದೆ. ರಾತ್ರಿ ಎರಡು ಕೋಣೆಗಳ ಮನೆಯಲ್ಲಿ ಒಂದರಲ್ಲಿ ಸಚ್ಚಿದಾನಂದ್ ದಂಪತಿ ಮಲಗಿದ್ದರೆ, ಮತ್ತೊಂದರಲ್ಲಿ ಅ‍ವರ ಐದು ಮತ್ತು ಏಳು ವರ್ಷದ ಇಬ್ಬರು ಮಕ್ಕಳು ಮಲಗಿದ್ದರು. ಗ್ರಿಲ್ ಮೂಲಕ ಬಾಲ್ಕನಿಗೆ ಬಂದ ಆರೋಪಿಗಳು, ಕಿಟಕಿ ಮೂಲಕ ಬಾಲ್ಕನಿಯ ಬಾಗಿಲ ಚಿಲಕವನ್ನು ತೆಗೆದು ಒಳಪ್ರವೇಶಿಸಿದ್ದರು. ನಂತರ ಮಕ್ಕಳು ಮಲಗಿರುವ ಕೊಠಡಿಯ ಕಬೋರ್ಡ್‌ನಲ್ಲಿಟ್ಟಿದ್ದ 74 ಗ್ರಾಂ ಚಿನ್ನಾಭರಣ, ಬೆಳ್ಳಿ ಹಾಗೂ ಮೊಬೈಲ್ ಕದ್ದು ಪರಾರಿಯಾಗಿದ್ದರು.

ಆಗ ಕೊನೆಗೆ ಸಚ್ಚಿದಾನಂದ್ ಅವರ ಮೊಬೈಲ್ ಆಧರಿಸಿ ಪಿಳ್ಳಗಾನಹಳ್ಳಿ ಸಮೀಪ ಹೆಬಿಯೇಸರ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬಳಿಕ ಆತ ವಿಚಾರಣೆಯಲ್ಲಿ ನೀಡಿದ ಮಾಹಿತಿ ಮೇರೆಗೆ ಇನ್ನುಳಿದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.ವಾಹನ ಕಳ್ಳನ ಸೆರೆ

ಬೆಂಗಳೂರು: ಬೇಗೂರು ಅಂಚೆ ಕಚೇರಿ ಸಮೀಪ ಕಾರ್ಯಾಚರಣೆ ನಡೆಸಿದಾಗ ವಾಹನ ಕಳ್ಳನೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಎಲೆಕ್ಚ್ರಾನಿಕ್ ಸಿಟಿಯ ನವಾಜ್ ಷರೀಫ್ ಬಂಧಿತನಾಗಿದ್ದು, ಆರೋಪಿಯಿಂದ 1 ಗೂಡ್ಸ್ ಆಟೋ ಹಾಗೂ 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ವಾಹನಗಳನ್ನು ಆರೋಪಿ ಕಳವು ಮಾಡುತ್ತಿದ್ದ ಎಂದು ಬೇಗೂರು ಠಾಣೆ ಪೊಲೀಸರು ಹೇಳಿದ್ದಾರೆ.

PREV

Recommended Stories

ದುಷ್ಕರ್ಮಿಗಳಿಂದ ಯುವಕನ ಕೊಲೆ; ಪೊಲೀಸರಿಂದ ಸಹೋದರನ ವಿಚಾರಣೆ
24 ಕ್ಯಾರೆಟ್ ಶುದ್ಧ ಚಿನ್ನದ ಹೆಸರಲ್ಲಿ ಟೋಪಿ ಹಾಕಿದವ ಬಂಧನ : 30 ಲಕ್ಷ ರು. ಮೌಲ್ಯದ ವಸ್ತು ಜಪ್ತಿ