ತಂಗಿ ಗಂಡನ ಜೊತೆ ಪ್ರೀತಿ : ಅಡ್ಡಿಯಾಗಿದ್ದ ಪತಿಯ ಕೊಲ್ಲಿಸಿದ ಪತ್ನಿ, ಹಂತಕರ ಬಂಧನ

KannadaprabhaNewsNetwork |  
Published : Oct 27, 2024, 02:16 AM ISTUpdated : Oct 27, 2024, 04:32 AM IST
Five-people-were-arrested-today-by-Bahraich-Police-in-the-case-of-shooting-dead-a-youth-in-Maharajganj

ಸಾರಾಂಶ

ತಂಗಿ ಗಂಡನ ಜೊತೆ ಪ್ರೀತಿಗೆ ಅಡ್ಡಿಯಾಗಿದ್ದ ಪತಿಯನ್ನು ಸುಪಾರಿ ಹಂತಕರಿಗೆ 1 ಲಕ್ಷ ಕೊಟ್ಟು ಕೊಲ್ಲಿಸಿದ ಪತ್ನಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

  ಬೆಂಗಳೂರು : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ತನ್ನ ಪತಿಯನ್ನು ₹1 ಲಕ್ಷಕ್ಕೆ ಸುಪಾರಿ ಕೊಟ್ಟು ಕೊಲೆ ಮಾಡಿಸಿ ಬಳಿಕ ಅಪರಿಚಿತರು ಕೊಂದಿದ್ದಾರೆ ಎಂದು ನಾಟಕವಾಡಿದ್ದ ಮೃತನ ಪತ್ನಿ ಹಾಗೂ ಆಕೆಯ ಭಾವ ಸೇರಿದಂತೆ ಐವರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೋಗನಹಳ್ಳಿ ನಿವಾಸಿ ನಾಗರತ್ನ, ಆಕೆ ಭಾವ (ಸೋದರಿ ಗಂಡ) ರಾಮ್‌, ಆಂಧ್ರಪ್ರದೇಶ ರಾಜ್ಯ ಧರ್ಮಾವರಂ ಮೂಲದ ಶಶಿಕುಮಾರ್, ಸುರೇಶ್ ಹಾಗೂ ಚಿನ್ನ ಬಂಧಿತರಾಗಿದ್ದಾರೆ. ಕೆಲ ದಿನಗಳ ಹಿಂದೆ ಬೋಗನಹಳ್ಳಿ ಸಮೀಪ ನಾಗರತ್ನ ಪತಿ ತಿಪ್ಪೇಶ್‌ನನ್ನು ಆರೋಪಿಗಳು ಹತ್ಯೆಗೈದಿದ್ದರು. ಈ ಕೃತ್ಯ ಎಸಗಿದ ಬಳಿಕ ತನ್ನ ಪತಿಯನ್ನು ಅಪರಿಚಿತರು ಕೊಂದಿದ್ದಾರೆ ಎಂದು ಬೆಳ್ಳಂದೂರು ಠಾಣೆಗೆ ಮೃತನ ಪತ್ನಿ ನಾಗರತ್ನ ದೂರು ನೀಡಿದ್ದಳು. ಈ ಕೃತ್ಯ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಮೃತನ ಪತ್ನಿ ನಿಜ ಬಣ್ಣ ಬಯಲುಗೊಳಿಸಿದ್ದಾರೆ.

ಸೋದರಿ ಪತಿ ಜತೆ ಲವ್, ಸೆಕ್ಸ್‌:

10 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ತಿಪ್ಪೇಶ್ ಹಾಗೂ ನಾಗರತ್ನ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೂಲಿ ಅರಸಿಕೊಂಡು ನಗರಕ್ಕೆ ಬಂದಿದ್ದ ತಿಪ್ಪೇಶ್‌ ದಂಪತಿ, ಬೆಳ್ಳಂದೂರು ಸಮೀಪ ನಿರ್ಮಾಣ ಹಂತದ ಕಟ್ಟಡಗಳಲ್ಲಿ ದುಡಿದು ಜೀವನ ಸಾಗಿಸುತ್ತಿದ್ದರು. ಬೋಗನಹಳ್ಳಿ ಲೇಬರ್ ಶೆಡ್‌ನಲ್ಲಿ ಅವರು ವಾಸವಾಗಿದ್ದರು. ಈ ನಡುವೆ ತನ್ನ ಭಾವ ರಾಮನ ಜತೆ ನಾಗರತ್ನಗೆ ಅಕ್ರಮ ಸಂಬಂಧ ಬೆಳೆಯಿತು.

ಈ ಸ್ನೇಹದ ವಿಚಾರ ತಿಳಿದ ತಿಪ್ಪೇಶ್‌, ಮನೆಯಲ್ಲಿ ಪತ್ನಿ ಜತೆ ಜಗಳವಾಡಿದ್ದ. ಅಲ್ಲದೆ ಭಾವನ ನಂಟು ಕಡಿದುಕೊಳ್ಳುವಂತೆ ಆತ ತಾಕೀತು ಮಾಡಿದ್ದ. ಈ ಗಲಾಟೆ ಸಂಗತಿಯನ್ನು ಭಾವನಿಗೆ ಹೇಳಿದ ನಾಗರತ್ನ, ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಪತಿಯನ್ನು ಕೊಲ್ಲಲು ಸೂಚಿಸಿದ್ದಳು. ತರುವಾಯ ಆಂಧ್ರಪ್ರದೇಶದ ಶಶಿಕುಮಾರ್, ಸುರೇಶ್ ಹಾಗೂ ಚಿನ್ನನ್ನು ಸಂಪರ್ಕಿಸಿ ₹1 ಲಕ್ಷಕ್ಕೆ ನಾಗರತ್ನ ಸುಪಾರಿ ಕೊಟ್ಟಿದ್ದಳು. ಈ ಹಣದಾಸೆಗೆ ಆರೋಪಿಗಳು ಕೃತ್ಯ ಎಸಗಲು ಸಮ್ಮತಿಸಿದ್ದರು. ಚಿತ್ರದುರ್ಗದಲ್ಲಿ ರಾಮ್ ಕೂಡ ನಿರ್ಮಾಣ ಹಂತದಲ್ಲಿ ಕಾರ್ಮಿಕನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಎಟಿಎಂನಲ್ಲಿ ಹಣ ತರುವ ನೆಪದಲ್ಲಿ ಕರೆದೊಯ್ದು ಹತ್ಯೆ

ಪೂರ್ವಯೋಜಿತ ಸಂಚಿನಂತೆ ಅ.14ರಂದು ತಿಪ್ಪೇಶ್ ಹತ್ಯೆಗೆ ನಾಗರತ್ನ ಗ್ಯಾಂಗ್ ಮುಹೂರ್ತ ನಿಶ್ಚಯಿಸಿದ್ದರು. ಅಂತೆಯೇ ಆ ದಿನ ಬೋಗನಹಳ್ಳಿ ಸಮೀಪದ ನೀಲಗಿರಿ ತೋಪಿನಲ್ಲಿ ಸುಪಾರಿ ಹಂತಕರು ಕಾಯ್ದಿದ್ದರು. ಆಗ ಎಟಿಎಂನಲ್ಲಿ ಹಣ ತರುವ ನೆಪದಲ್ಲಿ ಮನೆಯಿಂದ ಪತಿ ತಿಪ್ಪೇಶ್‌ನನ್ನು ಕರೆತಂದ ನಾಗರತ್ನ, ಎಟಿಎಂಗೆ ಹೋಗಲು ನೀಲಗಿರಿ ತೋಪಿನ ದಾರಿಯಲ್ಲಿ ಸಾಗಿದ್ದಾಳೆ. ಆ ವೇಳೆ ನೀಲಗಿರಿ ತೋಪು ಪ್ರವೇಶಿಸುತ್ತಿದ್ದಂತೆ ತಿಪ್ಪೇಶ್‌ ಮೇಲೆ ಹಲ್ಲೆ ನಡೆಸಿ ಬಳಿಕ ಉಸಿರುಗಟ್ಟಿಸಿ ಕೊಂದು ಆರೋಪಿಗಳು ಪರಾರಿಯಾಗಿದ್ದರು.

ಈ ಕೃತ್ಯ ಎಸಗಿದ ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ (112)ಗೆ ಕರೆ ಮಾಡಿದ್ದ ನಾಗರತ್ನ, ತಮ್ಮ ಪತಿಯನ್ನು ಯಾರೋ ಕೊಂದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಳು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಕೃತ್ಯ ನಡೆದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ನೀಲಗಿರಿ ತೋಪಿಗೆ ಎರಡು ಬೈಕ್‌ಗಳಲ್ಲಿ ಆರೋಪಿಗಳು ತೆರಳಿದ್ದ ದೃಶ್ಯಾವಳಿ ಸಿಕ್ಕಿತು. ಆ ಬೈಕ್‌ಗಳ ನೋಂದಣಿ ಸಂಖ್ಯೆ ಆಧರಿಸಿ ಮಾಲಿಕರನ್ನು ಮೊಬೈಲ್ ಸಂಗ್ರಹಿಸಲಾಯಿತು.

ಈ ಮೊಬೈಲ್ ಸಂಖ್ಯೆಗಳ ಕರೆಗಳ ವಿವರ ಸಂಗ್ರಹಿಸಿದಾಗ ನಾಗರತ್ನ ನಿರಂತರವಾಗಿ ಸಂಪರ್ಕದಲ್ಲಿದ್ದ ಸಂಗತಿ ಗೊತ್ತಾಯಿತು. ಈ ಮಾಹಿತಿ ಮೇರೆಗೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊನೆಗೆ ಸತ್ಯ ಬಾಯ್ಬಿಟ್ಟಳು. ಈಕೆ ನೀಡಿದ ಸುಳಿವು ಆಧರಿಸಿ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?
ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕನಿಂದ ಗೃಹಿಣಿಗೆ ಕಿರುಕುಳ