ವಾಕಿಂಗ್‌ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆಗೈದು ಮೊಬೈಲ್‌ ಹಾಗೂ ಹಣ ಸುಲಿಗೆ ಮಾಡಿದ್ದ ಐವರು ಕಳ್ಳರ ಬಂಧನ

KannadaprabhaNewsNetwork | Updated : Dec 29 2024, 04:11 AM IST

ಸಾರಾಂಶ

ಇತ್ತೀಚೆಗೆ ವಾಕಿಂಗ್‌ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆಗೈದು ಮೊಬೈಲ್‌ ಹಾಗೂ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ಇತ್ತೀಚೆಗೆ ವಾಕಿಂಗ್‌ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆಗೈದು ಮೊಬೈಲ್‌ ಹಾಗೂ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಾರಾಯಿಪಾಳ್ಯ ಸಾದಿಕ್‌ ಲೇಔಟ್‌ ನಿವಾಸಿಗಳಾದ ಮೊಹಮದ್‌ ಯಾಸರ್‌ (20), ಸೈಯದ್‌ ಅಯಾನ್‌ (19), ಅಬ್ಬಾಸ್‌ ಮತೀನ್‌ ಅಲಿಯಾಸ್‌ ಮೇಜರ್‌(21), ಕೆ.ಜಿ.ಹಳ್ಳಿ ಲಿಡ್ಕರ್ ಕಾಲೋನಿ ನಿವಾಸಿ ಮವೀನ್‌ ಕ್ರಿಸ್ಟೋಫರ್‌ ಅಲಿಯಾಸ್‌ ಸಿಬ್ಬಿ(23) ಮತ್ತು ಡಿ.ಜೆ.ಹಳ್ಳಿ ನಿವಾಸಿ ಸಿದ್ಧಿಕ್‌ ಖಾನ್‌(21) ಬಂಧಿತರು. ಆರೋಪಿಗಳಿಂದ 2,730 ರು. ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಚಾಕು ಜಪ್ತಿ ಮಾಡಲಾಗಿದೆ.

ಸಂಪಿಗೆಹಳ್ಳಿ ಎಂಸಿಇಸಿಎಚ್‌ಎಸ್‌ ಲೇಔಟ್‌ ನಿವಾಸಿ ಅಭಿಷೇಕ್‌ ಎಂಬುವವರು ನ.22ರಂದು ಮನೆ ಎದುರಿನ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಾ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಅಭಿಷೇಕ್‌ ಅವರನ್ನು ಅಡ್ಡಗಟ್ಟಿ ಹಲ್ಲೆಗೈದು ಮೊಬೈಲ್‌ ಹಾಗೂ 5 ಸಾವಿರ ರು. ನಗದು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಾತ್ಮೀದಾರರಿಂದ ಮಾಹಿತಿ:

ಪ್ರಕರಣದ ತನಿಖೆ ವೇಳೆ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಸಾರಾಯಿಪಾಳ್ಯ ಮುಖ್ಯರಸ್ತೆಯಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ತಾವೇ ಸುಲಿಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಆರೋಪಿಗಳಿಂದ ನಗದು, ಚಾಕು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋಜು-ಮಸ್ತಿಗೆ ಮಾಡಲು ಹಣ ಕಳವು: ತಪ್ಪೊಪ್ಪಿಗೆ:

ಬಂಧಿತ ಐವರು ಆರೋಪಿಗಳ ಪೈಕಿ ಅಬ್ಬಾಸ್‌ ಮತೀನ್‌ ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. ಈತನ ವಿರುದ್ಧ ಈ ಹಿಂದೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ. ಉಳಿದ ನಾಲ್ವರು ಆರೋಪಿಗಳು ಈ ಪ್ರಕರಣ ಹೊರತುಪಡಿಸಿ ಬೇರೆ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಇಲ್ಲ. ಮೋಜು-ಮಸ್ತಿಗೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಆರೋಪಿಗಳು ಸುಲಿಗೆ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಸದ್ಯ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article