ಸಾಲ ತೀರಿಸಲು ಅನ್ಯ ಮಾರ್ಗ ಇಲ್ಲದೇ ರಸ್ತೆಯಲ್ಲಿ ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸರ ಕಳವು

KannadaprabhaNewsNetwork |  
Published : Sep 28, 2024, 01:16 AM ISTUpdated : Sep 28, 2024, 04:51 AM IST
Chain Snaching

ಸಾರಾಂಶ

ಸಾಲ ತೀರಿಸಲು ಅನ್ಯ ಮಾರ್ಗ ಇಲ್ಲದೇ ರಸ್ತೆಯಲ್ಲಿ ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಸಾಲ ತೀರಿಸಲು ಅನ್ಯ ಮಾರ್ಗ ಇಲ್ಲದೇ ರಸ್ತೆಯಲ್ಲಿ ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿ ನಿವಾಸಿ ರಂಗಸ್ವಾಮಿ ಅಲಿಯಾಸ್‌ ರಂಗ (34) ಮತ್ತು ರಾಜರಾಜೇಶ್ವರಿನಗರ ಕೃಷ್ಣಪ್ಪ ಲೇಔಟ್‌ ನಿವಾಸಿ ಶಿವಕುಮಾರ್‌(43) ಬಂಧಿತರು. ಆರೋಪಿಗಳಿಂದ ₹1.50 ಲಕ್ಷ ಮೌಲ್ಯದ 32 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ದ್ವಾರಕನಗರದ ಚೆನ್ನಸಂದ್ರ ನಿವಾಸಿ ಮುನಿಯಮ್ಮ ಎಂಬುವವರು ಬನಶಂಕರಿ 6ನೇ ಹಂತದ ಬಿಡಿಎ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರ ಪೈಕಿ ಒಬ್ಬಾತ ಕೆಳಗೆ ಇಳಿದು ಮುನಿಯಮ್ಮನ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡು ಬಳಿಕ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಕೋಣನಕುಂಟೆ ಕ್ರಾಸ್‌ ಬಳಿ ಇಬ್ಬರು ವ್ಯಕ್ತಿಗಳನ್ನು ದ್ವಿಚಕ್ರ ವಾಹನ ಸಹಿತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸರಗಳವು ಮಾಡಿದ್ದು ತಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಸುಲಿಗೆ ಮಾಡಿದ್ದ ಚಿನ್ನದ ಸರವನ್ನು ಹೊಸಕೆರೆಹಳ್ಳಿ ಜುವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಈ ಮಾಹಿತಿ ಮೇರೆಗೆ ಪೊಲೀಸರು ಆ ಚಿನ್ನದ ಸರವನ್ನು ಜಪ್ತಿ ಮಾಡಿದ್ದಾರೆ.

ದುಶ್ಚಟದಿಂದಾಗಿ ಅಧಿಕ ಸಾಲ:  ಬಂಧಿತ ಇಬ್ಬರು ಆರೋಪಿಗಳು ಮಂಡ್ಯ ಮೂಲದವರಾಗಿದ್ದು, ಹಲವು ವರ್ಷಗಳಿಂದ ಕುಟುಂಬದ ಜತೆಗೆ ನಗರದಲ್ಲಿ ನೆಲೆಸಿದ್ದಾರೆ. ಆರೋಪಿ ರಂಗಸ್ವಾಮಿ ಕಾರು ಚಾಲಕನಾಗಿದ್ದರೆ, ಮತ್ತೊಬ್ಬ ಆರೋಪಿ ಶಿವಕುಮಾರ್‌ ಆಟೋ ಚಾಲಕ. 

ಇಬ್ಬರು ದುಶ್ಚಟ ಮತ್ತು ಶೋಕಿಗಾಗಿ ಸಾಕಷ್ಟು ಕೈ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಬೇರೆ ಮಾರ್ಗ ಇಲ್ಲದೆ ಸರಗಳವು ಕೃತ್ಯಕ್ಕೆ ಇಳಿದಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸದ್ಯ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌