ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಅರೆಸ್ಟ್ ವಾರೆಂಟ್ ಜಾರಿ

Published : May 19, 2024, 09:26 AM ISTUpdated : May 19, 2024, 09:43 AM IST
Prajwal Revanna.jpg

ಸಾರಾಂಶ

ನಾಪತ್ತೆಯಾದ ಸಂಸದ ಪ್ರಜ್ವಲ್ ರೇವಣ್ಣ 22 ದಿನಗಳು ಕಳೆದರೂ ಪತ್ತೆಯಾಗಿಲ್ಲ. ವಿಚಾರಣೆಗೆ ಹಾಜರಾಗದ ಪ್ರಜ್ವಲ್ ವಿರುದ್ಧ ಈಗ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.

ಬೆಂಗಳೂರು (ಮೇ 18): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಮೂಲಕ ವೈರಲ್ ಆದ ಬಳಿಕ ಅವರ ಮೇಲೆ ಹಲವು ಪೊಲೀಸ್ ಠಾಣೆಗಳಲ್ಲಿ ಲೈಂಗಿಕ ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಈ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಮಾಡುತ್ತಿದ್ದರೂ, ಲೋಕಸಭಾ ಚುನಾವಣೆ ಮತದಾನ ದಿನ ಏ.26ರಂದು ನಾಪತ್ತೆಯಾದ ಸಂಸದ ಪ್ರಜ್ವಲ್ ರೇವಣ್ಣ 22 ದಿನಗಳು ಕಳೆದರೂ ಪತ್ತೆಯಾಗಿಲ್ಲ. ವಿಚಾರಣೆಗೆ ಹಾಜರಾಗದ ಪ್ರಜ್ವಲ್ ವಿರುದ್ಧ ಈಗ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.

ಹೌದು, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಇದರಿಂದ ರಾಜ್ಯದ ಘನತೆಗೆ ಕುತ್ತು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು 2,900ಕ್ಕೂ ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಎಸ್‌ಐಟಿ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಇನ್ನು ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರು ಕೂಡ ದೂರು ಕೊಡಲು ನಿರಾಕರಿಸಿದ್ದಾರೆ. ಆದರೆ, ಈವರೆಗೆ ಧೈರ್ಯ ಮಾಡಿ ಕೆಲವು ಸಂತ್ರಸ್ತ ಮಹಿಳೆಯರು ದೂರು ದಾಖಲಿಸಿದ್ದಾರೆ. ಈ ಆಧಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಂಸದ ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡಿದರೂ ಹಾಜರಾಗಿಲ್ಲ.

ತಲೆಮರೆಸಿಕೊಂಡು 22 ದಿನ:

ಇನ್ನು ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿ ಈವರೆಗೆ 22 ದಿನಗಳು ಕಳೆದಿವೆ. ಎಸ್‌ಐಟಿ ವತಿಯಿಂದ ಲೈಂಗಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಕೇಸ್‌ ಕುರಿತು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದರೂ ಈವರೆಗೆ ಹಾಜರಾಗಿಲ್ಲ. ನಾನು ವಿದೇಶದಲ್ಲಿದ್ದೇನೆ, ವಿಚಾರಣೆಗೆ ಹಾಜರಾಗಲು ಒಂದು ವಾರಗಳ ಕಾಲಾವಕಾಶ ಕೊಡಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದ್ದರು. ಇದಾದ ನಂತರ, ನಾಲ್ಕೈದು ಬಾರಿ ಭಾರತಕ್ಕೆ ಮರಳಲು ಟಿಕೆಟ್ ಬುಕ್ ಮಾಡಿದ್ದರೂ, ಪುನಃ ಅದನ್ನು ರದ್ದುಗೊಳಿಸಿದ್ದಾರೆ. ಜೊತೆಗೆ, ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲು ಎಸ್‌ಐಟಿ ಬ್ಲೂ ಕಾರ್ನರ್ ನೋಟೀಸ್ ಹೊರಡಿಸಿತ್ತು. ಆದರೆ, ಪ್ರಜ್ವಲ್ ಇದಕ್ಕೂ ಕ್ಯಾರೇ ಎಂದಿಲ್ಲ.

ಹೀಗಾಗಿ, ಲೈಂಗಿಕ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅರೆಸ್ಟ್ ವಾರೆಂಟ್ ಜಾರಿಗೊಳಿಸಲು ಕೋರ್ಟ್‌ಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿರುವ ಪ್ರಜ್ವಲ್‌ನನ್ನು ಬಂಧಿಸಿ ದೇಶಕ್ಕೆ ಕರೆತರಲು ಅನುಕೂಲ ಆಗುವಂತೆ 42ನೇ ಎಸಿಎಂಎಂ ಕೋರ್ಟ್‌ನಿಂದ ಅರೆಸ್ಟ್ ವಾರೆಂಟ್ ಜಾರಿಗೊಳಿಸಿ ನ್ಯಾಯಾಧೀಶ ಜೆ.ಪ್ರೀತ್ ಅವರು ಆದೇಶ ಹೊರಡಿಸಿದ್ದಾರೆ. ಇನ್ನು ಅರೆಸ್ಟ್ ವಾರೆಂಟ್ ಮೇರೆಗೆ ಎಸ್‌ಐಟಿ ತಂಡದಿಂದ ಪ್ರಜ್ವಲ್ ಬಂಧಿಸಲು ಜಾಗತಿಕ ಮಟ್ಟದಲ್ಲಿ ಕಾರ್ಯಾಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಿದೆ.

ರೆಡ್ ಕಾರ್ನರ್ ನೋಟೀಸ್ ಜಾರಿಗೆ ಸಿದ್ಧತೆ:

ಇನ್ನು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಅರೆಸ್ಟ್ ವಾರೆಂಟ್ ಜಾರಿಯಾದ ಬೆನ್ನಲ್ಲಿಯೇ ಎಸ್‌ಐಟಿಗೆ ಹೆಚ್ಚು ಬಲ ಬಂದಿದೆ. ಈಗ ಅರೆಸ್ಟ್ ವಾರೆಂಟ್ ಆಧಾರದಲ್ಲಿ ಕೇಂದ್ರದ ಗೃಹ ಸಚಿವಾಲಯದ ನೆರವಿನೊಂದಿಗೆ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಲು ಮುಂದಾಗಿದೆ. ಇದರ ಬೆನ್ನಲ್ಲಿಯೇ ಎಸ್‌ಐಟಿ ಅಧಿಕಾರಿಗಳು ಸಿಬಿಐ ಇಂಟರ್‌ಪೋಲ್ ಸಂಪರ್ಕಿಸಿ ಬೇಡಿಕೆ ಸಲ್ಲಿಸಬೇಕು. ಸಿಬಿಐ ಒಪ್ಪಿಗೆ ಸೂಚಿಸಿದರೆ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಲಾಗುತ್ತದೆ. ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಆರೋಪಿ ತಲೆಮರೆಸಿಕೊಂಡಿರುವ ದೇಶದ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಿದ್ದಾರೆ.

ರೆಡ್ ಕಾರ್ನರ್ ಎಂದರೇನು?

ರೆಡ್ ಕಾರ್ನರ್ ನೋಟಿಸ್ ಅನ್ನು ರೆಡ್ ನೋಟಿಸ್ (RN) ಎಂದೂ ಕರೆಯುತ್ತಾರೆ. ಗಂಭೀರ ಪ್ರಕರಣದ ಆರೋಪಿ ಅಥವಾ ಶಂಕಿತ ವಿದೇಶಗಳಿಗೆ ಪರಾರಿಯಾದಲ್ಲಿ ಅವರನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸಲು ವಿಶ್ವಾದ್ಯಂತ ಕಾನೂನು ಜಾರಿ ಮಾಡುವವರಿಗೆ ವಿನಂತಿಯಾಗಿದೆ. ಅಂತಾರಾಷ್ಟ್ರೀಯವಾಗಿ ಬೇಕಾಗಿರುವ ಈ ಪರಾರಿಯಾದವರ ಬಗ್ಗೆ ಜಗತ್ತಿನಾದ್ಯಂತ ಪೊಲೀಸ್ ಪಡೆಗಳಿಗೆ ಇದು ಎಚ್ಚರಿಕೆ ನೀಡುತ್ತದೆ. ಆದರೆ, ಇದು ಅಂತಾರಾಷ್ಟ್ರೀಯ ಮಟ್ಟದ ಬಂಧನ ವಾರಂಟ್ ಅಲ್ಲ. ಅಲ್ಲಿ ಹಸ್ತಾಂತರ, ಶರಣಾಗತಿ ಅಥವಾ ಅಂತಹುದೇ ಕಾನೂನು ಕ್ರಮ ಬಾಕಿ ಇರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸಲು ಇದು ವಿನಂತಿಯಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನಿಯಂತ್ರಣ ತಪ್ಪಿ ಬೈಕ್ ಸವಾರ ದುರ್ಮರಣ
ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು