ಕಾರಲ್ಲೇ ಗ್ಯಾಂಗ್‌ರೇ* : ಐಟಿ ಕಂಪನಿ ಸಿಇಒ ಸೇರಿ ಮೂವರ ಬಂಧನ

Published : Dec 27, 2025, 05:24 AM IST
Udaipur

ಸಾರಾಂಶ

ರಾಜಸ್ಥಾನದ ಐಟಿ ಕಂಪನಿಯ ಮಹಿಳಾ ಮ್ಯಾನೇಜರ್‌ಗೆ ಅಮಲು ಪದಾರ್ಥ ಕೊಟ್ಟು ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಈ ಸಂಬಂಧ ಕಂಪನಿಯ ಸಿಇಓ, ಮಹಿಳಾ ಕಾರ್ಯನಿರ್ವಹಕ ಮುಖ್ಯಸ್ಥೆ ಮತ್ತು ಆಕೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಜೈಪುರ: ರಾಜಸ್ಥಾನದ ಐಟಿ ಕಂಪನಿಯ ಮಹಿಳಾ ಮ್ಯಾನೇಜರ್‌ಗೆ ಅಮಲು ಪದಾರ್ಥ ಕೊಟ್ಟು ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಈ ಸಂಬಂಧ ಕಂಪನಿಯ ಸಿಇಓ, ಮಹಿಳಾ ಕಾರ್ಯನಿರ್ವಹಕ ಮುಖ್ಯಸ್ಥೆ ಮತ್ತು ಆಕೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಸಿಇಒ ಜಿತೇಶ್‌ ಸಿಸೋಡಿಯಾ, ಗುರುವಾರ ಪಾರ್ಟಿ ಆಯೋಜಿಸಿದ್ದ. ಇದಕ್ಕೆ ಮ್ಯಾನೇಜರ್‌ಳನ್ನು ಸಹ ಆಹ್ವಾನಿಸಿದ್ದ. ಪಾರ್ಟಿ ಮುಗಿಸಿ ಮನೆಗೆ ತೆರಳುವಾಗ ಕಾರ್ಯನಿರ್ವಾಹಕ ಮುಖ್ಯಸ್ಥೆಯು ತಮ್ಮ ಕಾರಿನಲ್ಲಿ ಡ್ರಾಪ್‌ ಕೊಡುವುದಾಗಿ ಹತ್ತಿಸಿಕೊಂಡಿದ್ದಾರೆ. ಈ ವೇಳೆ ಸಿಸೋಡಿಯಾ, ಮುಖ್ಯಸ್ಥೆಯ ಗಂಡ ಗೌರವ್‌ ಸಿರೋಹಿ ಅವರು ಮ್ಯಾನೇಜರ್‌ಗೆ ಸಿಗರೆಟ್‌ ಮಾದರಿಯ ಅಮಲಿನ ವಸ್ತು ಕೊಟ್ಟಿದ್ದಾರೆ. ಅದನ್ನು ಸೇವಿಸಿದ ಮ್ಯಾನೇಜರ್‌ ಮೂರ್ಛೆ ತಪ್ಪಿದ್ದಾಳೆ. ಈ ವೇಳೆ ಆಕೆಯನ್ನು ಕರೆದೊಯ್ದು ಇಬ್ಬರು ಗ್ಯಾಂಗ್‌ರೇಪ್ ಎಸಗಿದ್ದಾರೆ. ಮರುದಿನ ಎದ್ದಾಗ ಆಕೆಗೆ ಘಟನೆ ತಿಳಿದುಬಂದಿದ್ದು, ಬಳಿಕ ದೂರಿತ್ತಿದ್ದಾರೆ.

ಘಟನೆ ಸಂಬಂಧ ಪೊಲೀಸರು. ಸಿಇಒ, ಮಹಿಳಾ ಮುಖ್ಯಸ್ಥೆ ಹಾಗೂ ಆಕೆಯ ಗಂಡನನ್ನು ಬಂಧಿಸಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಎಐ ಫೋಟೋ ತೆಗೆಯಲು ಕೋರ್ಟ್ ಆದೇಶ

ಮುಂಬೈ: ಎಐ (ಕೃತಕ ಬುದ್ಧಿಮತ್ತೆ) ಬಳಸಿ ರಚಿಸಿದ ನಟಿ ಶಿಲ್ಪಾ ಶೆಟ್ಟಿ ಮತ್ತು ಮಾರ್ಫ್ ಮಾಡಿದ ಫೋಟೋಗಳನ್ನು ಅತ್ಯಂತ ತೊಂದರೆದಾಯಕ ಮತ್ತು ಆಘಾತಕಾರಿ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಬಣ್ಣಿಸಿದೆ ಮತ್ತು ಅಂತಹ ಎಲ್ಲಾ ಲಿಂಕ್‌ಗಳು ತಕ್ಷಣವೇ ಅಳಿಸಿಹಾಕಲು ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶಿಸಿದೆ.

ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಮತ್ತು ತಮ್ಮ ತಿರುಚಿದ ಚಿತ್ರ/ವಿಡಿಯೋಗಳನ್ನು ತೆಗೆಯುವಂತೆ ವೆಬ್‌ಸೈಟ್‌ಗಳಿಗೆ ಆದೇಶಿಸಬೇಕು ಎಂದು ಕೋರಿ ನಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್‌ ಈ ಆದೇಶ ನೀಡಿದೆ.

ವೆಂಕಟೇಶ್ವರ ದರ್ಶನ ಪಡೆದ ಮೋಹನ್‌ ಭಾಗವತ್‌

ತಿರುಪತಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್‌ ಅವರು ಶುಕ್ರವಾರ ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ತೆರಳಿ ದರ್ಶನ ಪಡೆದರು.

ಭಾಗವತ್‌ ಅವರನ್ನು ತಿರುಪತಿ ತಿರುಮಲ ದೇವಸ್ವಂ (ಟಿಟಿಡಿ) ಅಧಿಕಾರಿಗಳು ಬರಮಾಡಿಕೊಂಡರು. ಬಳಿಕ ಭಾಗವತ್‌ ಅವರು ವೆಂಕಟೇಶ್ವರ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ದರ್ಶನದ ಬಳಿಕ ದೇಗುಲದ ಅರ್ಚಕರು ಭಾಗವತ್‌ ಅವರಿಗೆ ರೇಶ್ಮೆ ಶಾಲು ಹೊದಿಸಿ, ದೇಗುಲದ ಪ್ರಸಾದ ವಿತರಿಸಿ ಆಶೀರ್ವದಿಸಿದರು.

ಆರ್‌ಎಸ್‌ಎಸ್‌ ಮುಖ್ಯಸ್ಥರು ತಿರುಪತಿಯಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದರು.

ಪಾರಿವಾಳಕ್ಕೆ ಕಾಳು ಹಾಕಿದ್ದಕ್ಕೆ ₹5000 ದಂಡ! 

ಮುಂಬೈ: ಸಾರ್ವಜನಿಕ ಸ್ಥಳದಲ್ಲಿ ಪಾರಿವಾಳಕ್ಕೆ ಆಹಾರ ನೀಡುವುದು ಕಾನೂನು ಬಾಹಿರ ಎನ್ನುವ ನಿಯಮ ಉಲ್ಲಂಘಿಸಿ ಆಹಾರ ನೀಡಿದ್ದ ಮುಂಬೈನ ಉದ್ಯಮಿಯೊಬ್ಬರನ್ನು ನ್ಯಾಯಾಲಯ ದೋಷಿಯೆಂದು ತೀರ್ಪು ನೀಡಿದೆ. ಮಾತ್ರವಲ್ಲದೇ 5000 ರು. ದಂಡ ವಿಧಿಸಿದೆ.

ಪಾರಿವಾಳಗಳ ಹಿಕ್ಕೆ ಜನರ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಕಾರಣದಿಂದ ಸಾರ್ವಜನಿಕ ಸ್ಥಳದಲ್ಲಿ ಅವುಗಳಿಗೆ ಆಹಾರ ಹಾಕುವುದನ್ನು ಮುಂಬೈ ಮಹಾನಗರ ಪಾಲಿಕೆ ಕಳೆದ ತಿಂಗಳು ನಿರ್ಬಂಧಿಸಿದೆ. ಅದನ್ನು ಉಲ್ಲಂಘಿಸಿ ದಾದರ್‌ ನಿವಾಸಿ ನಿತೀನ್‌ ಶೇಠ್‌, ಕಬೂತರ್‌ಖಾನಾದಲ್ಲಿ ಪಾರಿವಾಳಗಳಿಗೆ ಧಾನ್ಯ ಹಾಕಿದ್ದ, ಹೀಗಾಗಿ ಆತನನ್ನು ಆ.1ರಂದು ಬಂಧಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿ.ಯು. ಮಿಸಾಲ್‌, ನಿತಿನ್‌ರನ್ನು ದೋಷಿಯೆಂದು ತೀರ್ಪು ನೀಡಿದೆ. ಆರೋಪಿ ಸ್ವಯಂಪ್ರೇರಣೆಯಿಂದ ಕ್ಷಮೆ ಕೇಳಿದ್ದಕ್ಕೆ ಕೋರ್ಟು 5000 ರು. ಮಾತ್ರ ದಂಡ ವಿಧಿಸಿದೆ.

ಇಂಡೋನೇಷ್ಯಾ ಆನೆ ಗಂಭೀರ ರೋಗ ತಡೆಗೆ ವನತಾರ ಸಹಾಯ

ಮುಂಬೈ: ಇಂಡೋನೇಷ್ಯಾದಲ್ಲಿ ಹರಡಿದ ಗಂಭೀರ ರೋಗ ‘ಇಇಎಚ್‌ವಿ’ ಸುಮಾತ್ರನ್ ಆನೆಗಳನ್ನು ಕೊಲ್ಲುತ್ತಿದೆ. ಇದನ್ನು ಪರಿಹರಿಸಲು, ಇಂಡೋನೇಷ್ಯಾದ ಅರಣ್ಯ ಸಚಿವಾಲಯ ಭಾರತದ ಗುಜರಾತ್‌ನ ಜಾಗತಿಕ ವನ್ಯಜೀವಿ ಸಂರಕ್ಷಣಾ ಕೇಂದ್ರವಾದ ವನತಾರದಿಂದ ತಾಂತ್ರಿಕ ಬೆಂಬಲ ಪಡೆಯುತ್ತಿದೆ. ಅನಂತ್ ಅಂಬಾನಿ ಸ್ಥಾಪಿಸಿದ ವನತಾರ, ಇಇಎಚ್‌ವಿಯಿಂದ ಉಂಟಾಗುವ ಸಾವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಆನೆ ಚಿಕಿತ್ಸೆ, ರೋಗದ ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಆರೈಕೆ ಕ್ಷೇತ್ರದಲ್ಲಿ ಪರಿಣತಿಯೊಂದಿಗೆ ಇಂಡೋನೇಷ್ಯಾದ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದೆ ಎಂದು ವನತಾರ ಪ್ರಕಟಣೆ ತಿಳಿಸಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಹತ್ಯೆ ಕೇಸಲ್ಲಿ ಬೈರತಿಗೆ ಸದ್ಯಕ್ಕಿಲ್ಲ ಬಂಧನ ಭೀತಿ
ಆಸ್ಪತ್ರೆಯ ಬಟ್ಟೆ ಬದಲಿಸುವ ಮಹಿಳೆ ದೃಶ್ಯ ಸೆರೆ ಹಿಡಿದ ಸಿಬ್ಬಂದಿ ಬಂಧನ