ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಯತ್ನ: ಗುಂಡು ಹಾರಿಸಿ ಇಬ್ಬರು ಆರೋಪಿಗಳ ಸೆರೆ

Published : Jun 16, 2025, 06:58 AM IST
KSRP

ಸಾರಾಂಶ

ರೌಡಿ ಶೀಟರ್‌ನ ಕೊಲೆ ಪ್ರಕರಣ ಸಂಬಂಧ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಜೆ.ಜೆ.ನಗರ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

 ಬೆಂಗಳೂರು :  ರೌಡಿ ಶೀಟರ್‌ನ ಕೊಲೆ ಪ್ರಕರಣ ಸಂಬಂಧ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಜೆ.ಜೆ.ನಗರ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಕಲಾಸಿಪಾಳ್ಯದ ಅರುಣ್ (27) ಮತ್ತು ಜೆ.ಜೆ.ನಗರ ಸಮೀಪದ ಜನತಾ ಕಾಲೊನಿಯ ದೀಪು (28) ಪೊಲೀಸರ ಗುಂಡೇಟು ತಿಂದು ಗಾಯಗೊಂಡವರು. ಈ ಇಬ್ಬರು ಆರೋಪಿಗಳು ಜೂ.14ರ ರಾತ್ರಿ ಜನತಾ ಕಾಲೊನಿಯಲ್ಲಿ ರೌಡಿ ಶೀಟರ್‌ ವಿಜಯ್ (26) ಎಂಬಾತನ ಮೇಲೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಆರೋಪಿಗಳಾದ ಅರುಣ್‌ ಮತ್ತು ದೀಪು ರಾಜರಾಜೇಶ್ವರಿನಗರ ಸಮೀಪದ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್‌ ಕೆಂಪೇಗೌಡ ನೇತೃತ್ವದ ಪೊಲೀಸರ ತಂಡ ಭಾನುವಾರ ಮಧ್ಯಾಹ್ನ ಅಲ್ಲಿಗೆ ತೆರಳಿದೆ. ಈ ವೇಳೆ ಆರೋಪಿಗಳು ಇನ್ಸ್‌ಪೆಕ್ಟರ್‌ ಕೆಂಪೇಗೌಡ ಮತ್ತು ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಇನ್ಸ್‌ಪೆಕ್ಟರ್‌ ಕೆಂಪೇಗೌಡ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.

ಇಬ್ಬರ ಕಾಲಿಗೂ ಗುಂಡು ಹಾರಿಸಿ ಸೆರೆ:

ಆದರೂ ಆರೋಪಿಗಳು ಶರಣಾಗದೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ಕೆಂಪೇಗೌಡ ಹಾಗೂ ಪಿಎಸ್‌ಐ ಪದ್ಮನಾಭ ಅವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡು ಕುಸಿದು ಬಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಇಬ್ಬರಿಗೂ ಶಸ್ತ್ರಚಿಕಿತ್ಸೆ ನಡೆಸಿ ಗುಂಡು ಹೊರಗೆ ತೆಗೆದಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆರೋಪಿಗಳ ದಾಳಿಯಿಂದ ಜೆ.ಜೆ.ನಗರ ಠಾಣೆಯ ಎಎಸ್‌ಐ ಕುಮಾರ್‌ ಮತ್ತು ಕಾನ್ಸ್‌ಟೇಬಲ್‌ ಕರೀಂ ಸಾಬ್‌ ಗಾಯಗೊಂಡಿದ್ದಾರೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಡುಗಡೆಯಾದ ಎರಡೇ ದಿನಕ್ಕೆ ಕೊಲೆ:

ಕೊಲೆಯಾದ ರೌಡಿ ಶೀಟರ್‌ ವಿಜಯ್‌ ತಮಿಳುನಾಡು ಮೂಲದವನು. ನಗರದ ಜನತಾ ಕಾಲೋನಿಯಲ್ಲಿ ನೆಲೆಸಿದ್ದ. ಸಿಟಿ ಮಾರ್ಕೆಟ್‌ನಲ್ಲಿ ಚಪ್ಪಲಿ ವ್ಯಾಪಾರ ಮಾಡುತ್ತಿದ್ದ. ಈತನ ವಿರುದ್ಧ ಈ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಕಾಟನ್‌ ಪೇಟೆ ಪೊಲೀಸರು ರೌಡಿ ಶೀಟ್‌ ತೆರೆದಿದ್ದರು. ಮೂರು ತಿಂಗಳ ಹಿಂದೆ ವಿಜಯ್‌, ಆರೋಪಿ ಅರುಣ್‌ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. ಈ ಪ್ರಕರಣದಲ್ಲಿ ಪೊಲೀಸರು ವಿಜಯ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಎರಡು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಈ ವಿಚಾರ ತಿಳಿದ ಅರುಣ್‌ ಶನಿವಾರ ರಾತ್ರಿ ತನ್ನ ಸಹಚರರೊಂದಿಗೆ ಜನತಾ ಕಾಲೋನಿಗೆ ಬಂದು ಮಾತನಾಡುವ ನೆಪದಲ್ಲಿ ವಿಜಯ್‌ನನ್ನು ಮನೆಯಿಂದ ಹೊರಗೆ ಕರೆಸಿಕೊಂಡು ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.

ಬಂಧಿತರಿಗೆ ಅಪರಾಧ ಹಿನ್ನೆಲೆ

ಬಂಧಿತ ಇಬ್ಬರು ಆರೋಪಿಗಳು ಅಪರಾಧ ಹಿನ್ನೆಲೆವುಳ್ಳವರಾಗಿದ್ದಾರೆ. ಆರೋಪಿ ಅರುಣ್‌ ಬ್ಯಾಟರಾಯನಪುರ ಪೊಲೀಸ್‌ ಠಾಣೆಯ ರೌಡಿ ಶೀಟರ್‌ ಆಗಿದ್ದಾನೆ. ಈತನ ವಿರುದ್ಧ ಈ ಹಿಂದೆ ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ದೀಪು ವಿರುದ್ಧ ಜೆ.ಜೆ.ನಗರ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಮೂರು ಅಪರಾಧ ಪ್ರಕರಣ ದಾಖಲಾಗಿವೆ. ಇನ್ನು ರೌಡಿ ವಿಜಯ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!