ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಹಾರದ ಅರಾ ಜಿಲ್ಲೆ ಮೂಲದ ಸಿದ್ದಾರ್ಥ (30) ಎಂಬಾತ ಮಂಗಳವಾರ ಮಧ್ಯಾಹ್ನ 2.13ಕ್ಕೆ ಮೆಟ್ರೋ ಹಳಿಗೆ ಹಾರಿದ್ದಾನೆ. ಕೆಂಗೇರಿಯಲ್ಲಿ ವಾಸವಾಗಿರುವ ಈತ ಎಲೆಕ್ಟ್ರಾನಿಕ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಸಾಲಬಾಧೆಗೆ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದ.
ಈತ ಹಳಿಗೆ ಹಾರಿದ್ದನ್ನು ನೋಡಿದ ನೋಡಿದ ಖಾಸಗೀ ಭದ್ರತಾ ಸಿಬ್ಬಂದಿ ರಶ್ಮಿ ಎಂಬುವವರು ತಕ್ಷಣ ಎಚ್ಚೆತ್ತು ಗಾಜಿನ ಪೆಟ್ಟಿಗೆಯನ್ನು ಕೈನಿಂದ ಒಡೆದು ತುರ್ತು ನಿರ್ವಹಣಾ ಬಟನ್ (ಎಮರ್ಜೆನ್ಸಿ ಟ್ರಿಪ್ ಸಿಸ್ಟಂ) ಒತ್ತಿ ರೈಲ್ವೆ ಹಳಿಯ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದರು. ಜೊತೆಗೆ ರೈಲಿನ ವೇಗವೂ ಕಡಿಮೆ ಆಗಿದೆ. ಸರಿಯಾಗಿ ಹಳಿ ಮಧ್ಯಭಾಗದಲ್ಲಿ ಸಿಲುಕಿದ್ದರಿಂದ ವ್ಯಕ್ತಿಗೆ ಪ್ರಾಣಾಪಾಯ ಆಗಿಲ್ಲ. ಆದರೆ, ಆತನನ್ನು ಹಳಿಯಿಂದ ಹೊರಕ್ಕೆ ತರಲು ಹತ್ತು ಹದಿನೈದು ನಿಮಿಷ ಪರದಾಡಬೇಕಾಯಿತು.ಬಳಿಕ ಸನಿಹದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಿದ್ಧಾರ್ಥ ಅವರಿಗೆ ಏನೂ ಆಗಿಲ್ಲ. ರಶ್ಮಿ ಅವರು ತುರ್ತು ಬಟನ್ ಇದ್ದ ಗಾಜನ್ನು ಒಡೆದ್ದರಿಂದ ಅವರ ಹಸ್ತಕ್ಕೆ ಗಾಯವಾಗಿದೆ. ಮೂರು ತಿಂಗಳ ತರಬೇತಿ ಪೂರೈಸಿ ಕಳೆದ ಜುಲೈನಲ್ಲಷ್ಟೇ ರಶ್ಮಿ ಭದ್ರತಾ ಸಿಬ್ಬಂದಿಯಾಗಿ ಸೇರ್ಪಡೆ ಆಗಿದ್ದಾರೆ. ಅವರ ಸಮಯಪ್ರಜ್ಞೆಯಿಂದ ದುರಂತ ತಪ್ಪಿದೆ ಎಂದು ಬಿಎಂಆರ್‌ಸಿಎಲ್ ಭದ್ರತಾ ಉಸ್ತುವಾರಿ ಸೆಲ್ವಂ ‘ಕನ್ನಡಪ್ರಭ’ಕ್ಕೆ ತಿಳಿಸಿದರು.ಸುಸೈಡ್ ಸ್ಪಾಟ್ ಆದ ಮೆಟ್ರೋ ನಿಲ್ದಾಣಗಳು
ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಇಲ್ಲದ ಕಾರಣ ನಮ್ಮ ಮೆಟ್ರೋ ಪ್ಲಾಟ್‌ಫಾರ್ಮ್ ಈಚೆಗೆ ಸೂಸೈಡ್ ಸ್ಪಾಟ್ ಆಗಿದೆ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಜ.5ರಂದು ಶ್ಯಾರೋನ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದ. ಮಾ. 21ರಂದು ಮುಂಬೈ ಮೂಲದ ದ್ರುವ್ ಅತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಕಳೆದ ಜೂನ್ 10ರಂದು ಯುವಕನೊಬ್ಬ ಟ್ರಾಕ್‌ಗೆ ಹಾರಿದ್ದರೂ ಬಚಾವಾಗಿದ್ದ. ಆಗಸ್ಟ್ 8ರಂದು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಮಗು ಜಾರಿ ಟ್ರಾಕ್ ಮೇಲೆ ಬಿದ್ದಿತ್ತು. ಮೆಟ್ರೋದ ಭದ್ರತಾ ಸಿಬ್ಬಂದಿ ಲೋಪ ಇದರಲ್ಲಿ ಎದ್ದು ಕಾಣುತ್ತಿದ್ದು, ವ್ಯವಸ್ಥಾಪಕ ನಿರ್ದೇಶಕರು ಸೂಕ್ತ ಕ್ರಮ ವಹಿಸುವಂತೆ ಬಿಎಂಆರ್‌ಸಿಎಲ್ ಎಂಪ್ಲಾಯಿಸ್ ಯೂನಿಯನ್ ಒತ್ತಾಯಿಸಿದೆ.