ಸಹಜೀವನ (ಲಿವಿಂಗ್ ಟುಗೆದರ್) ನಡೆಸುತ್ತಿದ್ದ ಯುವತಿಯ ಜತೆ ವಿವಾಹಕ್ಕೆ ಸಿದ್ಧತೆ ಮಾಡಿಕೊಂಡು, ಆಕೆಯ ಅಪ್ತಾಪ್ತ ತಂಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಸಹಜೀವನ (ಲಿವಿಂಗ್ ಟುಗೆದರ್) ನಡೆಸುತ್ತಿದ್ದ ಯುವತಿಯ ಜತೆ ವಿವಾಹಕ್ಕೆ ಸಿದ್ಧತೆ ಮಾಡಿಕೊಂಡು, ಆಕೆಯ ಅಪ್ತಾಪ್ತ ತಂಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
25 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ
ದಾಸರಹಳ್ಳಿ ನಿವಾಸಿ ಶುಭಾಂಶ ಶುಕ್ಲಾ(30) ಬಂಧಿತ. ಆರೋಪಿ ವಿರುದ್ಧ 25 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಶುಕ್ಲಾನನ್ನು ಬಂಧಿಸಲಾಗಿದೆ. ಆರೋಪಿ ಈ ಸಹೋದರಿಯರು ಮಾತ್ರವಲ್ಲದೆ ಇತರೆ ಹಲವು ಯುವತಿಯರಿಗೂ ವಂಚಿಸಿದ್ದಾನೆ ಎಂದು ಎನ್ನಲಾಗಿದೆ.
ಉತ್ತರ ಪ್ರದೇಶ ಮೂಲದ ಶುಭಾಂಶ ಶುಕ್ಲಾ ಬಹಳ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದು, ದಾಸರಹಳ್ಳಿಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಸಂತ್ರಸ್ತೆ ರಾಜಸ್ಥಾನ ಮೂಲದವರಾಗಿದ್ದು, ಪಾಲಕರು ಮತ್ತು ಅಪ್ರಾಪ್ತ ಸಹೋದರಿ ಜತೆ ದಾಸರಹಳ್ಳಿಯಲ್ಲಿ ವಾಸವಾಗಿದ್ದು, ಸಂತ್ರಸ್ತೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಹಾಗೂ ಸಂತ್ರಸ್ತೆ ಸುಮಾರು ಎರಡು ವರ್ಷಗಳಿಂದ ಪರಿಚಯಸ್ಥರಾಗಿದ್ದಾರೆ. ಇಬ್ಬರು ಲಿವಿಂಗ್ ಟುಗೆದರ್‌ನಲ್ಲಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಂಗಿ ಮೂಲಕ ಅಕ್ಕನ ಪರಿಚಯ:
ಆರೋಪಿಯು ಮೊದಲು ಸಂತ್ರಸ್ತೆ ಸಹೋದರಿಯ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡಿದ್ದ. ಆಕೆ ಮೂಲಕ ಕುಟುಂಬ ಸದಸ್ಯರನ್ನು ಪರಿಚಯಿಸಿಕೊಂಡಿದ್ದ. ಈ ವೇಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಸಹೋದರಿಯನ್ನು ಪ್ರೀತಿ ಬಲೆಯಲ್ಲಿ ಬೀಳಿಸಿಕೊಂಡು, ಬಳಿಕ ಸಂತ್ರಸ್ತೆಗೆ ಮುಂಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ತನ್ನೊಂದಿಗೆ ಕರೆದೊಯ್ದು ಲಿವಿಂಗ್ ಟುಗೆದರ್‌ನಲ್ಲಿದ್ದ. ಈ ಮಧ್ಯೆ, ಆರೋಪಿಗೆ ಈಗಾಗಲೇ ಮದುವೆಯಾಗಿರುವುದು ಆಕೆಗೆ ಗೊತ್ತಾಗಿದ್ದು, ಇದನ್ನು ಪ್ರಶ್ನಿಸಿದ್ದಾಳೆ. ಆಗ ಆರೋಪಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಂಬಿಸಿದ್ದ. ಇದರಿಂದ ಆಕೆ ಈತನೊಂದಿಗೆ ಸಂಬಂಧ ಮುಂದುವರಿಸಿದ್ದಳು. ಆ ನಂತರ ಸಂತ್ರಸ್ತೆಯಿಂದಲೇ 37 ಲಕ್ಷ ರು. ನಗದು ಹಾಗೂ 560 ಗ್ರಾಂ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ. ಸಂತ್ರಸ್ತೆಯ ಕುಟುಂಬದ ಸದಸ್ಯರಿಗೂ ಆರೋಪಿ ಪರಿಚಯಸ್ಥನಾಗಿದ್ದ. ಹೀಗಾಗಿ ಆಗಾಗ್ಗೆ ಮನೆಗೆ ಹೋಗಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣವನ್ನು ಆರೋಪಿ ಕಳವು ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಬಾಯಿಬಿಟ್ಟರೆ ಕೊಲೆ: ಅಪ್ರಾಪ್ತೆಗೆ ಬೆದರಿಕೆ
ಈ ನಡುವೆ ಸಂತ್ರಸ್ತೆ ಅಪ್ರಾಪ್ತೆ ತಂಗಿಯನ್ನು ಪುಸಲಾಯಿಸಿ ತನ್ನ ಫ್ಲ್ಯಾಟ್‌ಗೆ ಕರೆದೊಯ್ದು ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಚಾರವನ್ನು ಹೊರಗಡೆ ಯಾರಿಗೂ ಹೇಳಬಾರದು, ಒಂದು ವೇಳೆ ಹೇಳಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದ. ಈಕೆಯಿಂದಲೂ ಮನೆಯಲ್ಲಿದ್ದ ಚಿನ್ನಾಭರಣ ತರಿಸಿಕೊಂಡಿದ್ದ. ನಂತರ ಈತನ ದೌರ್ಜನ್ಯವನ್ನು ತನ್ನ ಸಹೋದರಿ ಬಳಿ ಹೇಳಿಕೊಂಡಿದ್ದಳು. ಬಳಿಕ ಇಬ್ಬರಿಗೂ ಆರೋಪಿ ಚಿತ್ರ ಹಿಂಸೆ ನೀಡಿದ್ದಾನೆ. ಕೊನೆಗೆ ಸಂತ್ರಸ್ತೆ ಆರೋಪಿ ವಿರುದ್ಧ ಸಾಕ್ಷಿ ಸಮೇತ ದೂರು ನೀಡಿದ್ದರು. ದೂರಿನನ್ವಯ ಆರೋಪಿ ಬಂಧಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ, ಹಣ ಸುಲಿಗೆ, ಲೈಂಗಿಕ ದೌರ್ಜನ್ಯ ಹಾಗೂ ಇತರೆ ಆರೋಪಗಳಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
