ಕನ್ನಡಪ್ರಭ ವಾರ್ತೆ ಗಂಗಾವತಿ

2025ರ ಮಾರ್ಚ್‌ನಲ್ಲಿ ತಾಲೂಕಿನ ಸಾಣಾಪುರ ಬಳಿ ಇಸ್ರೇಲ್‌ ಮಹಿಳೆ ಸೇರಿ ಇಬ್ಬರು ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಒಬ್ಬ ಪ್ರವಾಸಿಗನ ಹತ್ಯೆ ಪ್ರಕರಣದ ಮೂವರು ಅಪರಾಧಿಗಳಿಗೆ ಇಲ್ಲಿನ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಘಟನೆ ನಡೆದ ಒಂದು ವರ್ಷದೊಳಗೇ ತೀರ್ಪು ಪ್ರಕಟವಾಗಿರುವುದು ವಿಶೇಷ.

ಗಂಗಾವತಿಯ ಸಾಯಿನಗರದ ಹಂದಿ ಮಲ್ಲ, ಸಾಯಿ ಚೇತನ ಹಾಗೂ ಶರಣಪ್ಪ ಮರಣದಂಡನೆಗೆ ಒಳಗಾದವರು. ಇಲ್ಲಿನ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ ಅವರು ಸೋಮವಾರ ಈ ತೀರ್ಪು ಪ್ರಕಟಿಸಿದ್ದು, ಅಗತ್ಯಬಿದ್ದರೆ ಅಪರಾಧಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಸೂಚಿಸಿದ್ದಾರೆ.

ಏನಿದು ಪ್ರಕರಣ?:

2025ರ ಮಾರ್ಚ್‌ 6ರ ರಾತ್ರಿ, ಇಸ್ರೇಲ್ ದೇಶದ ಮಹಿಳೆ ಮತ್ತು ಆನೆಗೊಂದಿಯ ಹೋಂ ಸ್ಟೇ ಮಾಲೀಕರಾದ ಮಹಿಳೆ ಮತ್ತು ಅಮೆರಿಕ, ಒಡಿಶ್ಶಾದ ಮಹಿಳೆ, ಮಹಾರಾಷ್ಟ್ರದ ನಾಸಿಕ್ ಪ್ರಜೆ ಸೇರಿ ಐವರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ಇರುವ ತುಂಗಭದ್ರಾ ಜಲಾಶಯದ ಬಳಿಯ ಕೆರೆಯ ದಡದಲ್ಲಿ ಕುಳಿತು ಊಟ ಮಾಡುತ್ತಿದ್ದರು.


ಆ ಸಂದರ್ಭದಲ್ಲಿ ಗಂಗಾವತಿಯ ಸಾಯಿನಗರದ ಹಂದಿ ಮಲ್ಲ, ಸಾಯಿ ಚೇತನ, ಶರಣಪ್ಪ ಬೈಕ್ ಮೇಲೆ ಆಗಮಿಸಿದ್ದರು. ಈ ಮೂವರು ಇಸ್ರೇಲ್‌ ಮಹಿಳೆ ಹಾಗೂ ಹೋಂ ಸ್ಟೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರು. ಅಲ್ಲದೆ, ಒಡಿಶ್ಶಾದ ಬಿಬಾಸ್ ಬಳಿ ₹100 ಕೊಡುವಂತೆ ಬೇಡಿಕೆ ಇಟ್ಟಿದ್ದರು. ಅವರು ₹100 ಬದಲು ₹20 ನೀಡಿದ್ದಕ್ಕೆ ಆಕೆಯನ್ನು ಕಾಲುವೆಗೆ ನೂಕಿ, ಹತ್ಯೆ ಮಾಡಿದ್ದರು. ಬಳಿಕ, ಆಕೆಯ ರಕ್ಷಣೆಗೆ ಬಂದ ಅಮೆರಿಕದ ಮಹಿಳೆ ಮತ್ತು ಮಹಾರಾಷ್ಟ್ರದ ನಾಸಿಕ್ ಮೂಲದ ಪ್ರಜೆಯನ್ನು ಕಾಲುವೆಗೆ ನೂಕಿದ್ದರು. ಆದರೆ, ಇವರಿಬ್ಬರೂ ಈಜಾಡಿ ದಡ ಸೇರಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಹಂದಿ ಮಲ್ಲ ಮತ್ತು ಸಾಯಿ ಚೇತನನನ್ನು ಹೊಸಪೇಟೆಯಲ್ಲಿ ಬಂಧಿಸಿದ್ದರು. ಇನ್ನೋರ್ವ ಅಪರಾಧಿ ಶರಣಪ್ಪನನ್ನು ಗಂಗಾವತಿಯ ಚೈನ್ ರೈಲ್ವೆ ಸ್ಟೇಷನ್ ಬಳಿ ಸೆರೆ ಹಿಡಿದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಕಳೆದ 7 ತಿಂಗಳಿನಿಂದ ಇಲ್ಲಿನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಸೋಮವಾರ ಮೂವರಿಗೂ ಶಿಕ್ಷೆ ಪ್ರಕಟವಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕಿ ನಾಗಲಕ್ಷ್ಮೀ ವಾದಿಸಿದ್ದರು.++++ಐತಿಹಾಸಿಕ ತೀರ್ಪು:

ತೀರ್ಪು ಪ್ರಕಟವಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮೀ, ವಿದೇಶಿ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಗಂಗಾವತಿಯನ್ನು ತಲ್ಲಣಗೊಳಿಸಿತ್ತು. ಹಂಪಿ ಮತ್ತು ಆನೆಗೊಂದಿ ಪ್ರದೇಶಕ್ಕೆ ಪ್ರವಾಸಿಗರು ಬರಲು ಹಿಂಜರಿಯುವಂತಾಗಿತ್ತು. ವಿಶ್ವವಿಖ್ಯಾತ ಹಂಪಿಗೆ ಕೆಟ್ಟ ಹೆಸರು ತಂದಿತ್ತು. ಈ ಸುದ್ದಿ ವಿದೇಶದಲ್ಲೂ ಸದ್ದು ಮಾಡಿತ್ತು. ಈಗ ಮೂವರಿಗೂ ಮರಣ ದಂಡನೆ ವಿಧಿಸಿರುವುದು ಜನರಿಗೆ ಸಮಾಧಾನ ತಂದಿದೆ. ಅಪರಾಧಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಅಲ್ಲದೆ, ಜಿಲ್ಲೆಯ ಮಟ್ಟಿಗೆ ಐತಿಹಾಸಿಕ ಎನಿಸಿದೆ.

ಪೊಲೀಸ್‌ ತಂಡಕ್ಕೆ ವಿಶೇಷ ಬಹುಮಾನ; ಎಸ್ಪಿ:

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಎಲ್.ಅರಸಿದ್ದಿ ಮಾತನಾಡಿ, ಗ್ರಾಮೀಣ ಠಾಣೆಯ ಡಿವೈಎಸ್ಪಿಗಳಾದ ಸಿದ್ದಲಿಂಗಪ್ಪಗೌಡ, ಜಾಯಪ್ಪ ನ್ಯಾಮಗೌಡರ್, ಸಿಪಿಐ ಸೋಮಶೇಖರ್ ಜುಟ್ಟಲ್ ಮತ್ತು ಸಿಪಿಐ ರಂಗಪ್ಪ ದೊಡ್ಮನಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯ ಪ್ರಶಂಸನೀಯ. ಜತೆಗೆ, ಸರ್ಕಾರಿ ಅಭಿಯೋಜಕರು ಸರ್ಕಾರದ ಪರವಾಗಿ ವಾದ ಮಂಡಿಸಿ, ಆರೋಪಿಗಳಿಗೆ ಶಿಕ್ಷೆ ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ತಂಡಕ್ಕೆ ವಿಶೇಷ ಬಹುಮಾನ ಘೋಷಿಸಲಾಗುವುದು ಎಂದು ತಿಳಿಸಿದರು.