ಕಾನೂನು ಬದ್ಧವಾಗಿಯೇ ಅಂತರ್ಜಾತಿ ವಿವಾಹವಾಗಿದ್ದರೂ, ಯುವತಿ ತಂದೆ ಹಾಗೂ ಕುಟುಂಬಸ್ಥರೂ ಸೇರಿ ತಮ್ಮ ಮಗಳನ್ನು ಬರ್ಬರ ಕೊಲೆ ಮಾಡಿದ್ದಾರೆ. ಅಲ್ಲದೇ, ಯುವಕನ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಹೀಗಾಗಿ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು.

ಹುಬ್ಬಳ್ಳಿ:

ತಾಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಖಂಡಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿಯ ಅಂಬೇಡ್ಕರ್ ಸರ್ಕಲ್‌ನಿಂದ ಆರಂಭಗೊಂಡ ಪ್ರತಿಭಟನಾ ರ್‍ಯಾಲಿಯು ತಹಸೀಲ್ದಾರ ಕಚೇರಿ ವರೆಗೂ ನಡೆಯಿತು. ರ್‍ಯಾಲಿಯ ಮಹಾನಗರ ಪಾಲಿಕೆಗೆ ಬರುತ್ತಿದ್ದಂತೆ ಕೆಲ ಹೊತ್ತು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಅನ್ಯಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎಂದು ಗರ್ಭಿಣಿ ಮಗಳನ್ನೇ ಕೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಗಳಿಗೆ ಕಠಿಣಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ಪರಮೇಶ್ವರ ಕಾಳೆ, ಕಾನೂನು ಬದ್ಧವಾಗಿಯೇ ಅಂತರ್ಜಾತಿ ವಿವಾಹವಾಗಿದ್ದರೂ, ಯುವತಿ ತಂದೆ ಹಾಗೂ ಕುಟುಂಬಸ್ಥರೂ ಸೇರಿ ತಮ್ಮ ಮಗಳನ್ನು ಬರ್ಬರ ಕೊಲೆ ಮಾಡಿದ್ದಾರೆ. ಅಲ್ಲದೇ, ಯುವಕನ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಹೀಗಾಗಿ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ತ್ವರಿತ ನ್ಯಾಯಾಲಯ ಸ್ಥಾಪಿಸುವ ಜತೆಗೆ ಸಂತ್ರಸ್ತರ ಪರ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು. ಆ ಮೂಲಕ ನೊಂದ ಕುಟುಂಬಕ್ಕೆ ತ್ವರಿತ ನ್ಯಾಯ ಒದಗಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅಲ್ಲದೇ, ಸಂತ್ರಸ್ತರ ಕುಟುಂಬಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ₹ 1 ಕೋಟಿ ಪರಿಹಾರ, ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ, ಕುಟುಂಬಕ್ಕೆ ತಲಾ 5 ಎಕರೆ ಜಮೀನು ನೀಡುವ ಜತೆಗೆ ಮಕ್ಕಳ ವಿದ್ಯಾಭ್ಯಾಸದ ಖರ್ಚು-ವೆಚ್ಚ ಸರ್ಕಾರವೇ ಭರಿಸಬೇಕು. ಹಾಗೆಯೇ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾರುತಿ ದೊಡ್ಡಮನಿ, ಮಲ್ಲಿಕಾರ್ಜುನ ಯಾತಗೇರಿ, ಪ್ರಭು ಪ್ರಭಾಕರ, ಗುರುನಾಥ ಚಲವಾದಿ, ಪರಮೇಶ ದೊಡ್ಡಮನಿ, ಶ್ರೀಧರ ಕೌತಾಳ, ಮಲ್ಲಿಕಾರ್ಜುನ ಬಿಳಾರ, ಉಡಚಪ್ಪ ಕಾಕಣ್ಣವರ, ಲಿಂಗರಾಜ ಹೊಸಮನಿ, ಚಂದ್ರಶೇಖರ ಯಾತಗೇರಿ, ಕಮಲವ್ವ ಹೊಸಮನಿ, ರೇವಣಸಿದ್ದಪ್ಪ ಹೊಸಮನಿ, ಅಂಬರೇಶ ಚಲವಾದಿ, ರಾಜಪ್ಪ ಕಾಳೆ, ರಾಜು ಗುಣದಾಳ, ಶಂಕರ ಪಾತ್ರದ ಸೇರಿದಂತೆ ಇತರರು ಇದ್ದರು.