ಓದುವುದು ಅಂದರೆ ಮನಸ್ಸಿನಾಳದಿಂದ ಪರೀಕ್ಷೆ ಎದುರಿಸಿ ಬಂದಿರುವ ಪ್ರಶ್ನೆಗೆ ಉತ್ತರಿಸುತ್ತೇನೆ ಎಂಬ ಧೈರ್ಯದ ಗಟ್ಟಿತನ ಸಹ ಆಗಿದೆ ಎಂದು ವಿಜಯ ಚಂದ್ರಶೇಖರ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಇಒ ಜಗದೀಶ ಅಂಗಡಿ ಹೇಳಿದರು

ಕುಷ್ಟಗಿ/ಕೊಪ್ಪಳ: ಜಿಲ್ಲೆಯಲ್ಲಿ ಕುಷ್ಟಗಿ ತಾಲೂಕಿನ ಫಲಿತಾಂಶ ಮೊದಲ ಸ್ಥಾನದಲ್ಲಿರಬೇಕು. ಮಕ್ಕಳು ಓದುವ ಚೈತನ್ಯ ಮೂಡಿಸಿಕೊಳ್ಳಬೇಕು. ಓದುವುದು ಅಂದರೆ ಮನಸ್ಸಿನಾಳದಿಂದ ಪರೀಕ್ಷೆ ಎದುರಿಸಿ ಬಂದಿರುವ ಪ್ರಶ್ನೆಗೆ ಉತ್ತರಿಸುತ್ತೇನೆ ಎಂಬ ಧೈರ್ಯದ ಗಟ್ಟಿತನ ಸಹ ಆಗಿದೆ ಎಂದು ವಿಜಯ ಚಂದ್ರಶೇಖರ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಇಒ ಜಗದೀಶ ಅಂಗಡಿ ಹೇಳಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್, ಎಸ್‌ವಿಸಿ ಶಿಕ್ಷಣ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಗಳದ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ (40+) ಸಿದ್ಧತಾ ಕಾರ್ಯಗಾರ ಅಂಗವಾಗಿ ಜರುಗಿದ ವಿದ್ಯಾರ್ಥಿಗಳಿಗೆ ತಜ್ಞರಿಂದ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರೀಕ್ಷೆಯಲ್ಲಿ ಎದುರಾಗುವ ಪ್ರಶ್ನೆಗಳಿಗೆ ಕೌಶಲ್ಯದಿಂದ ಉತ್ತರಿಸಬೇಕು. ಪ್ರಶ್ನೆ ಹೇಗಿರುತ್ತದೆ ಎಂಬ ಭಯ ಇರಬಾರದು. ಭಯ ಮನದಟ್ಟಾಗಿರುವ ಎಷ್ಟೋ ವಿಷಯಗಳನ್ನು ಮರೆಸುತ್ತದೆ. ಮೊದಲಿಗೆ ಭಯ ಎಂಬ ಮಾತು ಮಕ್ಕಳಲ್ಲಿ ಬರಬಾರದು. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣತೆ ಬಾಳಿಗೆ ಬೆಳಕು ನೀಡುತ್ತದೆ. ಕನ್ನಡಪ್ರಭ, ಸುವರ್ಣ ನ್ಯೂಸ್ ಕಾರ್ಯಾಗಾರ ನಿಜಕ್ಕೂ ಅವಿಸ್ಮರಣೀಯ ಎಂದರು.ಕನ್ನಡಪ್ರಭ ಪತ್ರಿಕೆಯ ಹುಬ್ಬಳ್ಳಿಯ ಸ್ಥಾನಿಕ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಮಕ್ಕಳು ಪರೀಕ್ಷೆಯನ್ನು ಸಂಭ್ರಮದಿಂದ ಎದುರಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಬೇಡ, ಧೈರ್ಯದಿಂದ ಎದುರಿಸಲು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ. ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಇಂಥ ಕಾರ್ಯ ಮಾಡುವುದು ನಮ್ಮ ಕೆಲಸವಾಗಿದೆ. ಪರೀಕ್ಷಾ ಕೋಣೆ ದೆವ್ವದ ಮನೆ ಅಲ್ಲ, ಅದೊಂದು ದೇವರ ಸಾನ್ನಿಧ್ಯ ಇದ್ದಂತೆ. ಸಂಭ್ರಮದಿಂದ ಒಳ ಹೋಗಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಈ ಬಾರಿಯೂ ಒಳ್ಳೆಯ ಫಲಿತಾಂಶ ಬರಲಿ ಎಂದು ಹಾರೈಸುತ್ತೇನೆ ಎಂದರು.ಶಿಕ್ಷಣ ಇಲಾಖೆಯ ನಾಗಪ್ಪ ಬಿಳಿಯಪ್ಪನವರ, ಪ್ರೌಢ ವಿಭಾಗದ ಇಸಿಒ ಮಹ್ಮದ್ ಇಸ್ಹಾಕ್, ಪ್ರಾಥಮಿಕ ವಿಭಾಗದ ಇಸಿಒಗಳಾದ ಶಿವಾನಂದ ಪಂಪಣ್ಣವರ, ರಾಘಪ್ಪ, ಸಿಆರ್‌ಪಿಗಳಾದ ಶರಣೇಗೌಡ, ಶ್ರೀಕಾಂತ ಇತರರಿದ್ದರು. ವೀಣಾ ಎಸ್. ಅವರಿಂದ ಪ್ರಾರ್ಥನೆ ಜರುಗಿತು.