ವಿದ್ಯಾರ್ಥಿ ದಂಗೆ ಹತ್ತಿಕ್ಕಿದ ಕೇಸಲ್ಲಿ ಬಾಂಗ್ಲಾ ಮಾಜಿ ಪ್ರಧಾನಿಗೆ ಗಲ್ಲು

| Published : Nov 18 2025, 02:15 AM IST

ವಿದ್ಯಾರ್ಥಿ ದಂಗೆ ಹತ್ತಿಕ್ಕಿದ ಕೇಸಲ್ಲಿ ಬಾಂಗ್ಲಾ ಮಾಜಿ ಪ್ರಧಾನಿಗೆ ಗಲ್ಲು
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ದಂಗೆಗೆ ಬೆಚ್ಚಿ ಭಾರತಕ್ಕೆ ಕಳೆದ ವರ್ಷ ಪಲಾಯನ ಮಾಡಿ ಭಾರತಕ್ಕೆ ಬಂದ ಬಾಂಗ್ಲಾದೇಶಿ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾಗೆ ಬಾಂಗ್ಲಾ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ.

- ನರಮೇಧ, ದೌರ್ಜನ್ಯ ಆರೋಪ: ಹಸೀನಾಗೆ ಕಠಿಣ ಶಿಕ್ಷೆ- ಹಸೀನಾ ಹಸ್ತಾಂತರಕ್ಕೆ ಭಾರತಕ್ಕೆ ಬಾಂಗ್ಲಾ ಮನವಿ

---

ಪಕ್ಷಪಾತಿ ತೀರ್ಪು

ಇದು ಸಂಪೂರ್ಣ ಪಕ್ಷಪಾತಿ ಹಾಗೂ ರಾಜಕೀಯಪ್ರೇರಿತ ತೀರ್ಪು. ವಿಚಾರಣೆಯನ್ನು ನನ್ನ ಅನುಪಸ್ಥಿತಿಯಲ್ಲಿ ನಡೆಸಲಾಗಿದೆ. ನ್ಯಾಯೋಚಿತವಾಗಿ ನನಗೆ ವಾದಕ್ಕೆ ಅ‍ವಕಾಶ ನೀಡಿಲ್ಲ. ನ್ಯಾಯಾಧೀಶರು ಮತ್ತು ವಕೀಲರು ಹಾಲಿ ಸರ್ಕಾರದ ಪರ ಬಹಿರಂಗವಾಗಿಯೇ ಸಹಾನುಭೂತಿ ವ್ಯಕ್ತಪಡಿಸಿದರು. ನಿಜವಾಗಿಯೂ ನ್ಯಾಯ ಒದಗಿಸುವ ಉದ್ದೇಶ ಅವರಿಗೆ ಇಲ್ಲ.

- ಶೇಖ್ ಹಸೀನಾ, ಪದಚ್ಯುತ ಬಾಂಗ್ಲಾ ಪ್ರಧಾನಿ

==

ಪಿಟಿಐ ಢಾಕಾ

ವಿದ್ಯಾರ್ಥಿಗಳ ದಂಗೆಗೆ ಬೆಚ್ಚಿ ಭಾರತಕ್ಕೆ ಕಳೆದ ವರ್ಷ ಪಲಾಯನ ಮಾಡಿ ಭಾರತಕ್ಕೆ ಬಂದ ಬಾಂಗ್ಲಾದೇಶಿ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾಗೆ ಬಾಂಗ್ಲಾ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ.

ಅವರ ಅವಾಮಿ ಲೀಗ್‌ ನೇತೃತ್ವದ ಸರ್ಕಾರ ಪತನಕ್ಕೆ ಕಾರಣವಾದ ವಿದ್ಯಾರ್ಥಿಗಳ ನೇತೃತ್ವದ ದಂಗೆ ಹತ್ತಿಕ್ಕಲು ನರಮೇಧ ನಡೆಸಿದ ಹಾಗೂ ‘ಮಾನವೀಯತೆ ವಿರುದ್ಧದ ಅಪರಾಧ’ ಎಸಗಿದ ಆರೋಪ ಹೊರಿಸಿ ಅವರಿಗೆ ಸಜೆ ನೀಡಲಾಗಿದೆ.

ವಿದ್ಯಾರ್ಥಿ ದಂಗೆ ಹತ್ತಿಕ್ಕಿದ ಪ್ರಕರಣದಲ್ಲಿ ಸುಮಾರು 3 ತಿಂಗಳ ಕಾಲ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿದ ನ್ಯಾ। ಮೊಹಮ್ಮದ್‌ ಗೋಲಂ ಮೊರ್ತಜಾ ಮಜುಮ್ದಾರ್‌ ನೇತೃತ್ವದ ತ್ರಿಸದಸ್ಯ ನ್ಯಾಯಮಂಡಳಿ ಸೋಮವಾರ ಹಸೀನಾ ಅನುಪಸ್ಥಿತಿಯಲ್ಲಿ ಈ ತೀರ್ಪು ಪ್ರಕಟಿಸಿದೆ. ಸದ್ಯ ಹಸೀನಾ ಭಾರತದಲ್ಲಿ ಅಘೋಷಿತ ರಾಜಾಶ್ರಯದಲ್ಲಿದ್ದಾರೆ.

ಹಸೀನಾ ಜತೆಗೆ ಅವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ, ಸದ್ಯ ದೇಶಭ್ರಷ್ಟರಾಗಿರುವ ಅಸಾದುಜ್ಜಾಮಾನ್‌ ಖಾನ್‌ ಕಮಾಲ್‌ ಅವರಿಗೂ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ. ಆದರೆ, ಮೂರನೇ ಆರೋಪಿಯಾದ ಮಾಜಿ ಪೊಲೀಸ್‌ ಮುಖ್ಯಸ್ಥ ಚೌಧುರಿ ಅಬ್ದುಲ್ಲಾ ಅಲ್‌ ಮಮುನ್‌ ಅವರು ಮಾಫಿಸಾಕ್ಷಿಯಾಗಲು ಒಪ್ಪಿ ನ್ಯಾಯಮಂಡಳಿ ಹಾಗೂ ದೇಶದ ಜನರ ಮುಂದೆ ಕ್ಷಮೆ ಕೋರಿರುವ ಹಿನ್ನೆಲೆಯಲ್ಲಿ 5 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

ಹಸೀನಾ, ಅಸಾದುಜ್ಜಾಮಾನ್‌ ಖಾನ್‌ಗೆ ಮರಣದಂಡನೆ ವಿಧಿಸಿದ್ದಷ್ಟೇ ಅಲ್ಲದೆ, ಅವರ ಆಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಸರ್ಕಾರಕ್ಕೆ ನ್ಯಾಯಾಧಿಕರಣ ನಿರ್ದೇಶನ ನೀಡಿದೆ.

ನ್ಯಾಯಾಧಿಕರಣವು ಸೋಮವಾರ ಮಧ್ಯಾಹ್ನ 12.30ರ ಹೊತ್ತಿಗೆ 453 ಪುಟಗಳ ಆದೇಶ ಓದಿ ಹೇಳಿದ್ದು, ಈ ವೇಳೆ ಕೋರ್ಟ್‌ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು ಹಾಗೂ ಕಲಾಪ ನೇರಪ್ರಸಾರ ಮಾಡಲಾಗಿತ್ತು. ತೀರ್ಪು ಪ್ರಕಟಣೆ ಬೆನ್ನಲ್ಲೇ ಕೆಲವರು ಕೋರ್ಟಲ್ಲಿ ಹರ್ಷೋದ್ಗಾರಗೈದರು.

ಕೋರ್ಟ್‌ ಹೇಳಿದ್ದೇನು?

‘ಮೂವರೂ ಆರೋಪಿಗಳು ಪರಸ್ಪರ ಸಹಕಾರದೊಂದಿಗೆ ದೌರ್ಜನ್ಯ ಎಸಗುವ ಮೂಲಕ ದೇಶಾದ್ಯಂತ ಪ್ರತಿಭಟನಾಕಾರರನ್ನು ಹತ್ಯೆ ಮಾಡುವ ಕೆಲಸ ಮಾಡಿದ್ದರು. ಚನ್‌ಖಾರ್‌ಪುಲ್‌ನಲ್ಲಿ 6 ಪ್ರತಿಭಟನಾಕಾರರನ್ನು ಮಾರಕಾಸ್ತ್ರ ಬಳಸಿ 2024ರ ಆ.5ರಂದು ಹತ್ಯೆ ಮಾಡಲಾಗಿತ್ತು. ಹಸೀನಾ ಅವರ ಆದೇಶದ ಹಿನ್ನೆಲೆಯಲ್ಲಿ ಆಗಿನ ಗೃಹ ಸಚಿವರು ಮತ್ತು ಪೊಲೀಸ್‌ ಮುಖ್ಯಸ್ಥರು ಯಾವುದೇ ಕ್ರಮ ಕೈಗೊಳ್ಳದೆ ವಿದ್ಯಾರ್ಥಿಗಳ ಸಾವಿಗೆ ಕಾರಣರಾದರು. ಈ ಸಾವುಗಳು ಶೇಖ್‌ ಹಸೀನಾ ಆದೇಶಗಳು ಹಾಗೂ ಅವರ ಅರಿವಿದ್ದೇ ಸಂಭವಿಸಿವೆ. ಈ ರೀತಿಯ ನಡವಳಿಕೆ ಮೂಲಕ ಅವರು ಮಾನವೀಯತೆಯ ವಿರುದ್ಧ ಅಪರಾಧ ಎಸಗಿದ್ದಾರೆ’ ಎಂದು ನ್ಯಾಯಾಧಿಕರಣ ತನ್ನ ಆದೇಶದಲ್ಲಿ ತಿಳಿಸಿದೆ.

‘ಶೇಖ್‌ ಹಸೀನಾ ಸರ್ಕಾರವು ವಿದ್ಯಾರ್ಥಿಗಳ ಬೇಡಿಕೆಗೆ ಮನ್ನಣೆ ನೀಡುವ ಮತ್ತು ಸಮಸ್ಯೆ ಆಲಿಸುವ ಬದಲು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿತು. ವಿದ್ಯಾರ್ಥಿ ಪ್ರತಿಭಟನಾಕಾರರನ್ನು ರಜಾಕಾರರು (ದಾಳಿಕೋರರು) ಎಂದು ಕರೆಯಿತು (ರಜಾಕಾರರು ಎಂಬ ಪದ ಬಾಂಗ್ಲಾದಲ್ಲಿ ಅವಮಾನಕರ ಹೇಳಿಕೆಯಾಗಿದೆ)’ ಎಂದು ಹೇಳಿದೆ.

‘ಈ ಹೇಳಿಕೆ ಬಳಿಕ ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ಯುವತಿಯರು ತೀವ್ರ ಆಕ್ರೋಶಕ್ಕೆ ಒಳಗಾಗಿ ಬೀದಿಗಿಳಿದರು. ಹಸೀನಾ ವಿದ್ಯಾರ್ಥಿಗಳ ಪ್ರತಿಭಟನೆ ಹತ್ತಿಕ್ಕಲು ಆದೇಶಿಸಿದರು. ಈ ವೇಳೆ ಢಾಕಾ ವಿವಿಯ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯಲ್ಲಿ ಅವಾಮಿ ಲೀಗ್‌ನ ಛಾತ್ರ ಲೀಗ್‌ ಮತ್ತು ಯುವ ಲೀಗ್‌ನ ಪಾತ್ರ ಇತ್ತು ಎಂಬುದು ಸ್ಪಷ್ಟವಾಗಿದೆ’ ಎಂದಿದೆ.

‘ಪ್ರತಿಭಟನೆ ನಿಯಂತ್ರಣೆಗಾಗಿ ಶೇಖ್‌ ಹಸೀನಾ ಅವರು ಪೊಲೀಸರಿಗೆ ಡ್ರೋನ್‌ಗಳನ್ನು ಬಳಸಿ ಪ್ರತಿಭಟನಾಕಾರರನ್ನು ಪತ್ತೆ ಹಚ್ಚಿ, ಕಾಪ್ಟರ್‌ಗಳು ಹಾಗೂ ಮಾರಕಾಯುದ್ಧಗಳನ್ನು ಬಳಸಿ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲು ಸೂಚಿಸಿದ್ದರು. ಅಂದಿನ ಗೃಹ ಸಚಿವ ಅಸಾದುಜ್ಜಾಮಾನ್‌ ಖಾನ್‌ ಕಮಾಲ್‌ ಮತ್ತು ಮಾಜಿ ಪೊಲೀಸ್‌ ಮುಖ್ಯಸ್ಥ ಚೌಧುರಿ ಅಬ್ದುಲ್ಲಾ ಅಲ್‌ ಮಮುನ್‌ ಅವರ ಆದೇಶದಂತೆ ಪ್ರತಿಭಟನಾಕಾರರ ವಿರುದ್ಧ ಡ್ರೋನ್‌ಗಳು ಹಾಗೂ ಮಾರಕ ಆಯುಧಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಲಾಗಿತ್ತು. ಈ ರೀತಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿಫಲರಾಗುವ ಮೂಲಕ ಇವರೆಲ್ಲ ಶಿಕ್ಷೆಗೆ ಅರ್ಹರಾಗಿದ್ದಾರೆ. ಆದರೆ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಅಪರಾಧದ ಕುರಿತು ಪೂರ್ಣ ಮಾಹಿತಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಮಾಜಿ ಪೊಲೀಸ್‌ ಮುಖ್ಯಸ್ಥ ಅಬ್ದುಲ್ಲಾ ಅಲ್‌ ಮಮುನ್‌ ಅವರಿಗೆ ಕ್ಷಮೆ ನೀಡಲಾಗಿದೆ’ ಎಂದು ಕೋರ್ಟ್‌ ಹೇಳಿದೆ.

‘ಹಸೀನಾ ದೇಶಭ್ರಷ್ಟರಾಗಿರುವುದೇ ಅವರು ತಪ್ಪು ಮಾಡಿರುವುದಕ್ಕೆ ಸಾಕ್ಷಿ. ಹಸೀನಾ ಅವರನ್ನು ಪ್ರಚೋದನೆ, ಹತ್ಯೆಗೆ ಆದೇಶ ಹಾಗೂ ದೌರ್ಜನ್ಯ ತಡೆಯುವಲ್ಲಿ ವಿಫಲ ಹೀಗೆ ಮೂರು ಪ್ರಕರಣಗಳಲ್ಲಿ ದೋಷಿ ಎಂದು ಪರಿಗಣಿಸಲಾಗಿದೆ. ನಾವು ಅವರಿಗೆ ಒಂದೇ ವಾಕ್ಯದ ದಂಡನೆ ನೀಡಲು ನಿರ್ಧರಿಸಿದ್ದೇವೆ, ಅದು ‘ಮರಣದಂಡನೆ’ ಎಂದು ಅದು ಹೇಳಿದೆ.