ವಾಷಿಂಗ್ಟನ್‌: ದೇಶದ ಆಡಳಿತವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯ ಮೂಲಕ ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಟ್ರಂಪ್‌ ಮುಂದಾಗಿದ್ದಾರೆ ಎಂಬ ಊಹೆಯನ್ನು ಅಮೆರಿಕ ಸಾರಾಸಗಟಾಗಿ ತಳ್ಳಿಹಾಕಿದ್ದು, ‘ನಮ್ಮ ಉದ್ದೇಶ ಬರೀ ಗೆಲುವು. ಸಂಘರ್ಷವನ್ನು ನಾವು ಆರಂಭಿಸಿಲ್ಲ. ಆದರೆ ಅದು ನಮ್ಮಿಂದಲೇ ಮುಕ್ತಾಯವಾಗುವುದು’ ಎಂದಿದೆ.

ನಿರಂತರ ಯುದ್ಧ ಮಾಡುತ್ತಿರಲು ಇದು ಇರಾಕ್‌ ಅಲ್ಲ

ಸಮರ ಶುರುವಾದಾಗಿನಿಂದ ಇದೇ ಮೊದಲ ಬಾರಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಕಾರ್ಯದರ್ಶಿ ಪೀಟ್‌ ಹೆಗ್ಸೆತ್‌, ‘ನಿರಂತರ ಯುದ್ಧ ಮಾಡುತ್ತಿರಲು ಇದು ಇರಾಕ್‌(ಇರಾಕ್‌ ಜತೆ ಅಮೆರಿಕದ 9 ವರ್ಷದ ಯುದ್ಧದ ಉಲ್ಲೇಖ) ಅಲ್ಲ. ಇರಾನ್‌ ತನ್ನ ಅಣ್ವಸ್ತ್ರ ಅನ್ವೇಷಣೆಯನ್ನು ನಡೆಸುವ ಉದ್ದೇಶದಿಂದ ಬಲಿಷ್ಠ ಕ್ಷಿಪಣಿ ಮತ್ತು ಡ್ರೋನ್‌ಗಳ ಬಲಿಷ್ಠ ಕೋಟೆಯನ್ನು ಕಟ್ಟಿಕೊಂಡಿದೆ. ಈ ಮೂಲಕ ಉದ್ವಿಗ್ನತೆಗೆ ನಾಂದಿ ಹಾಡಿದೆ.

ಕ್ಷಿಪಣಿ ಬೆದರಿಕೆಯನ್ನು ಇಲ್ಲವಾಗಿಸುವುದು

 ನಮ್ಮ ದಾಳಿಯ ಉದ್ದೇಶ ಇರಾನ್‌ ಕಡೆಯಿಂದ ಕ್ಷಿಪಣಿ ಬೆದರಿಕೆಯನ್ನು ಇಲ್ಲವಾಗಿಸುವುದು, ಅವರು ಅಣ್ವಸ್ತ್ರ ಹೊಂದದಂತೆ ಮಾಡುವುದಷ್ಟೇ ಹೊರತು, ಆಡಳಿತ ಬದಲಾವಣೆ, ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣವಲ್ಲ. ಇದಕ್ಕೆಲ್ಲಾ ನಾವು ಸಮಯ ಮತ್ತು ಜೀವವನ್ನು ವ್ಯರ್ಥ ಮಾಡುವುದಿಲ್ಲ. ಗೆಲುವೊಂದೇ ನಮ್ಮ ಗುರಿ’ ಎಂದು ಹೇಳಿದ್ದಾರೆ. ಈ ಮೂಲಕ, ಇರಾನ್‌ ಜನರ ಒಳಿತಿಗಿಂತ ನಮ್ಮ ಹಿತಾಸಕ್ತಿ ಸಾಧಿಸಲು ಈ ಯುದ್ಧವನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ.


ಜತೆಗೆ, ‘ಸದ್ಯ ಅಮೆರಿಕ ಪಡೆಗಳು ಇರಾನ್‌ನಲ್ಲಿ ಇವೆಯೇ?’ ಎಂಬ ಪ್ರಶ್ನೆಗೆ ‘ಇಲ್ಲ’ ಎಂದ ಹೆಗ್ಸೆತ್‌, ಮುಂದಿನ ಯೋಜನೆಯನ್ನು ಬಹಿರಂಗಪಡಿಸುವುದು ಮೂರ್ಖತನವಾದೀತು ಎಂದಿದ್ದಾರೆ.