ಮೂರೂವರೆ ದಶಕಗಳಿಂದ ಇರಾನ್‌ ಅನ್ನು ತನ್ನ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿದ್ದ ಇರಾನ್‌ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಅಲಿ ಖಮೇನಿ (86), ಶನಿವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವಾಯು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

ದುಬೈ: ಮೂರೂವರೆ ದಶಕಗಳಿಂದ ಇರಾನ್‌ ಅನ್ನು ತನ್ನ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿದ್ದ ಇರಾನ್‌ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಅಲಿ ಖಮೇನಿ (86), ಶನಿವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವಾಯು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

ಇದಲ್ಲದೆ, ‘ದಾಳಿಯಲ್ಲಿ ಒಟ್ಟು 48 ಇರಾನಿ ನಾಯಕರು ಬಲಿಯಾಗಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ಇದರೊಂದಿಗೆ ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಪಣ ತೊಟ್ಟಿದ್ದ ಅಮೆರಿಕಕ್ಕೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಮತ್ತೊಂದೆಡೆ ಈ ಬೆಳವಣಿಗೆ ಇರಾನ್‌ನ ಭವಿಷ್ಯ ಮತ್ತು ಮಧ್ಯಪ್ರಾಚ್ಯ ವಲಯದಲ್ಲಿ ಅಸ್ಥಿರತೆಯ ಆತಂಕವನ್ನೂ ಹುಟ್ಟುಹಾಕಿದೆ.

ಈ ದಾಳಿಯಲ್ಲಿ ಖಮೇನಿ ಮಾತ್ರವಲ್ಲೇ, ದೇಶದ ಮಾಜಿ ಅಧ್ಯಕ್ಷ ಅಹಮದಿನೇಜಾದ್‌, ಇರಾನ್‌ನ ರಕ್ಷಣಾ ಸಚಿವ ಜ. ಅಜೀಜ್‌ ನಾಸಿರ್‌ಝದೇಹ್‌, ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದೊಲ್‌ ರಹೀಂ ಮೌಸವಿ, ದೇಶದ ಅತ್ಯಂತ ಶಕ್ತಿಶಾಲಿ ಅರೆಸೇನಾಪಡೆಯಾದ ರೆವಲ್ಯೂಷನರಿ ಗಾರ್ಡ್‌ನ ಮುಖ್ಯಸ್ಥ ಮತ್ತು ಖಮೇನಿಯ ಭದ್ರತಾ ಸಲಹೆಗಾರ ಕೂಡಾ ದಾಳಿಯಲ್ಲಿ ಸಾವನ್ನಪ್ಪಿದ ವಿಷಯವನ್ನು ಇರಾನ್‌ ಸರ್ಕಾರ ಖಚಿತಪಡಿಸಿದೆ.

ತಮ್ಮ ಮಾತು ಕೇಳದ್ದಕ್ಕೆ ಇತ್ತೀಚೆಗಷ್ಟೇ ವೆನಿಜುವೆಲಾದ ಮೇಲೆ ದಾಳಿ ನಡೆಸಿ ಆ ದೇಶದ ಅಧ್ಯಕ್ಷ ಮಡುರೋ ಅವರನ್ನು ಅಪಹರಿಸಿ ತನ್ನ ದೇಶಕ್ಕೆ ತಂದಿದ್ದ ಅಮೆರಿಕ ಸೇನೆ, ಇದೀಗ ಮತ್ತೊಂದು ದೇಶದ ಅಧ್ಯಕ್ಷರನ್ನು ಅವರ ದೇಶದಲ್ಲೇ ಹತ್ಯೆಗೈದಿದೆ. ಅಮೆರಿಕದ ಈ ದಾಳಿಯನ್ನು ಹಲವು ದೇಶಗಳು ಖಂಡಿಸಿದ್ದರೆ, ಇನ್ನು ಕೆಲವು ದೇಶಗಳು ಸ್ವಾಗತಿಸಿವೆ.

ಖಮೇನಿ ಸಾವಿನ ಸುದ್ದಿ ಘೋಷಿಸಿದ ಅಮೆರಿಕ

ಖಮೇನಿ ಸಾವಿನ ಸುದ್ದಿ ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಇತಿಹಾದ ಅತ್ಯಂತ ದುಷ್ಟ ವ್ಯಕ್ತಿ ಖಮೇನಿ ಸಾವನ್ನಪ್ಪಿದ್ದಾನೆ. ಇದು ಇರಾನಿಯನ್ನರಿಗೆ ತನ್ನ ದೇಶವನ್ನು ಮರಳಿ ಪಡೆಯಲು ಸದವಕಾಶ ಎಂದು ಬಣ್ಣಿಸಿದ್ದರೆ, ಖಮೇನಿ ಸಾವಿನ ಸುದ್ದಿಯನ್ನು ಖಚಿತಪಡಿಸಿದ ಇರಾನ್‌ ಸರ್ಕಾರದ ಈ ದೊಡ್ಡ ಅಪರಾಧಕ್ಕೆ ಸೂಕ್ತ ಉತ್ತರ ನೀಡದೇ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಧಾರ್ಮಿಕ ನಾಯಕನ ಸಾವಿನ ಹಿನ್ನೆಲೆಯಲ್ಲಿ ದೇಶದಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಖಮೇನಿ ಹತ್ಯೆ:

ಮೂರು ದಶಕಗಳಿಂದ ಇರಾನ್‌ ಅನ್ನು ಕಟ್ಟರ್‌ ಇಸ್ಲಾಂ ದೇಶವನ್ನಾಗಿ ಮಾಡಿದ್ದ, ರಹಸ್ಯವಾಗಿ ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದ, ಪರೋಕ್ಷ ಯುದ್ಧದ ಮೂಲಕ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಕಾಪಾಡಿಕೊಂಡೇ ಬಂದಿದ್ದ ಇರಾನ್‌ನ ನಂ.1 ನಾಯಕ ಖಮೇನಿಯನ್ನು ಅಮೆರಿಕ ಸೇನಾಪಡೆಗಳು ಹತ್ಯೆಗೈಯುವಲ್ಲಿ ಯಶಸ್ವಿಯಾಗಿವೆ. ರಾಜದಾನಿ ಟೆಹ್ರಾನ್‌ನ ಮೇಲೆ ನಡೆಸಿದ ಭೀಕರ ಬಾಂಬ್‌ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದಾನೆ. ಈ ವಿಷಯವನ್ನು ಖಚಿತಪಡಿಸಿರುವ ಇರಾನ್‌ ಸರ್ಕಾರ, ‘ಕಚೇರಿಯಲ್ಲೇ ಅವರ ಸಾವು, ಅವರು ಜನರ ನಡುವೆಯೇ ಇದ್ದರು, ತಮ್ಮ ಹೊಣೆಗಾರಿಕೆಯನ್ನು ಮುಂಚೂಣಿಯಲ್ಲಿ ನಿಂತು ನಿರ್ವಹಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿ. ಈ ದಾಳಿ ಜಾಗತಿಕ ದುರಂಹಕ್ಕಾಗಿ ಸಾಕ್ಷಿ’ ಎಂದು ಬಣ್ಣಿಸಿದೆ. ಅಲ್ಲದೆ ಈ ದೊಡ್ಡ ಅಪರಾಧಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದೆ.

ಅಮೆರಿಕ ದಾಳಿಗೆ ಇರಾನ್‌ನ ಸರ್ವೊಚ್ಚ ಧಾರ್ಮಿಕ ನಾಯಕ ಬಲಿ

ಮನೆಯ ಮೇಲೆ ನಡೆದ ದಾಳಿಯ ವೇಳೆ ಸ್ಥಳದಲ್ಲೇ ಖಮೇನಿ ಸಾವು

ಮೂರೂವರೆ ದಶಕಗಳ ಸರ್ವಾಧಿಕಾರಿ ಆಡಳಿತಕ್ಕೆ ಕಡೆಗೂ ತೆರೆ

ಮಾಜಿ ಅಧ್ಯಕ್ಷ, ರಕ್ಷಣಾ ಸಚಿವ, ಸಶಸ್ತ್ರ ಪಡೆ ಮುಖ್ಯಸ್ಥರೂ ಹತ

ಇರಾನಿಯರಿಗೆ ದೇಶ ಮರಳಿ ಪಡೆಯಲು ಅವಕಾಶ: ಟ್ರಂಪ್‌