ಸಮಾಜದ ಶಕ್ತಿಯಾಗಿರುವ ಹೆಣ್ಣು ಮಕ್ಕಳು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರವು ನಿರ್ಣಾಯಕವಾಗಿದೆ. ಪೋಷಕರು ಹೆಣ್ಣು ಗಂಡು ಎಂದು ಭೇದ ಭಾವ ಮಾಡದೆ ಶಿಕ್ಷಣ ಮತ್ತಿತರೆ ಸೌಲಭ್ಯಗಳನ್ನು ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಿಸಿ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬಾಲ್ಯ ವಿವಾಹ ಪದ್ಧತಿ ನಾಗರಿಕ ಸಮಾಜಕ್ಕೆ ಅಂಟಿರುವ ಶಾಪವಾಗಿದೆ ಎಂದು ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸುಧೀರ್ ಹೇಳಿದರು.ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಮದ್ದೂರಿನ ಧ್ವನಿ ಲಯನ್ ಸಂಸ್ಥೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಹಾಗೂ ಆಹಾರ ಸಂರಕ್ಷಣೆ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಶಕ್ತಿಯಾಗಿರುವ ಹೆಣ್ಣು ಮಕ್ಕಳು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರವು ನಿರ್ಣಾಯಕವಾಗಿದೆ. ಪೋಷಕರು ಹೆಣ್ಣು ಗಂಡು ಎಂದು ಭೇದ ಭಾವ ಮಾಡದೆ ಶಿಕ್ಷಣ ಮತ್ತಿತರೆ ಸೌಲಭ್ಯಗಳನ್ನು ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಿಸಿ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದರು.

ಹೆಣ್ಣಿಗೆ 18, ಗಂಡಿಗೆ 21 ವರ್ಷ ತುಂಬುವ ಮುನ್ನವೇ ವಿವಾಹ ಮಾಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಬೇಗ ಮದುವೆ ಮಾಡುವುದರಿಂದ ಹೆಣ್ಣು ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಹಲವು ತೊಂದರೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಪರ ಸಿವಿಲ್ ನ್ಯಾಯಾಧೀಶರಾದ ದೇವರಾಜು ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಗೆ ವಿರುದ್ಧವಾಗಿ ಪೋಷಕರು ಹೆಣ್ಣು ಮಕ್ಕಳನ್ನು ವಿವಾಹ ಬಂಧನಲ್ಲಿ ಸಿಲುಕಿಸಿ ಸಮಸ್ಯೆಗಳ ಕೂಪದೊಳಗೆ ತಳ್ಳಬಾರದು ಕಿವಿಮಾತು ಹೇಳಿದರು.

ಧ್ವನಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಲೋಹಿತ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ ನಡೆದರೆ ವಿದ್ಯಾರ್ಥಿಗಳು ಹಾಗೂ ಯುವಜನರು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಬಾಲ್ಯ ವಿವಾಹ ಕಡ್ಡಾಯವಾಗಿ ತಡೆಯಲು ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಧ್ವನಿ ಲಯನ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ರಜನಿ ರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ, ಆರಕ್ಷಕ ನಿರೀಕ್ಷಕರಾದ ಆನಂದೇಗೌಡ, ಬಿ.ಸುಮಾರಾಣಿ, ಲಯನ್ ಪ್ರತಿಮಾ, ಲಯನ್ ದಿನೇಶ್ ಕುಮಾರ್, ಜಿಲ್ಲಾ ಗವರ್ನರ್ ಲಯನ್ ಸಿದ್ದರಾಜು, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ರಾಘವೇಂದ್ರ, ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ಎಸ್.ಬಸವೇಗೌಡ ಇದ್ದರು.