ಬೆಂಗಳೂರಿನ ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಪತ್ನಿ ಪ್ರಚೋದನೆ ಮೇಲ್ನೋಟಕ್ಕೆ ಸಾಬೀತು

KannadaprabhaNewsNetwork |  
Published : Jan 07, 2025, 01:30 AM ISTUpdated : Jan 07, 2025, 04:17 AM IST
UP atul subhash suicide case nikita singhania lucknow connection arj siddiqui police investigation

ಸಾರಾಂಶ

ಬೆಂಗಳೂರಿನ ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದ ಸಂಬಂಧ ಆತನ ಪತ್ನಿ ಹಾಗೂ ಇತರರ ವಿರುದ್ಧ ದಾಖಲಿಸಿರುವ ದೂರು ಸಮರ್ಥನೀಯವಾಗಿದ್ದು, ಮೇಲ್ನೋಟಕ್ಕೆ ಆರೋಪಿಗಳು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಂಶಗಳಿವೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಬೆಂಗಳೂರು :ಬೆಂಗಳೂರಿನ ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದ ಸಂಬಂಧ ಆತನ ಪತ್ನಿ ಹಾಗೂ ಇತರರ ವಿರುದ್ಧ ದಾಖಲಿಸಿರುವ ದೂರು ಸಮರ್ಥನೀಯವಾಗಿದ್ದು, ಮೇಲ್ನೋಟಕ್ಕೆ ಆರೋಪಿಗಳು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಂಶಗಳಿವೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅತುಲ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಮೃತನ ಪತ್ನಿ ನಿಖಿತಾ ಸುಭಾಷ್‌, ಆಕೆಯ ತಾಯಿ ನಿಶಾ, ಸಹೋದರ ಅನುರಾಗ್‌ ಮತ್ತು ಸಂಬಂಧಿ ಸುಶೀಲ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಗಳು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿಚಾರಣಾಧೀನ ನ್ಯಾಯಾಲಯ, ಕಳೆದ ಶನಿವಾರ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆತ್ಮಹತ್ಯೆ ಪ್ರಚೋದನೆಯಡಿ ಪ್ರಕರಣ ದಾಖಲಿಸಲು ಯಾವುದೇ ಅಂಶಗಳು ಇಲ್ಲ. ಆರೋಪಿಗಳನ್ನು ಬಂಧಿಸುವುದಕ್ಕೆ ಆಧಾರಗಳನ್ನೂ ಪೊಲೀಸರು ನೀಡಿಲ್ಲ. ಹಾಗಾಗಿ, ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಎಫ್‌ಐಆರ್‌ ಓದಿದರೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಎಲ್ಲ ಅಂಶಗಳು ಸ್ಪಷ್ಟವಾಗಿವೆ. ತಮ್ಮ ಪ್ರಕಾರ ಎಲ್ಲ ವಿವರಗಳನ್ನು ನೀಡಲಾಗಿದೆ. ಎಫ್‌ಐಆರ್‌ನಲ್ಲಿ ಇದಕ್ಕಿಂತ ಇನ್ನೂ ಹೆಚ್ಚಿನದನ್ನು ಏನು ಕೊಡಲಾಗುತ್ತದೆ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿತು.

ನಂತರ ಸರ್ಕಾರಿ ವಕೀಲರು ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದರು. ಅದನ್ನು ಪರಿಗಣಿಸಿದ ಅರ್ಜಿಯ ಮುಂದಿನ ವಿಚಾರಣೆ ವೇಳೆ ತನಿಖೆ ಸಂದರ್ಭದಲ್ಲಿ ಸಂಗ್ರಹಿಸಿರುವ ದಾಖಲೆಗಳನ್ನು ಸಲ್ಲಿಸಬೇಕು. ಜೊತೆಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಎರಡು ವಾರ ಮುಂದೂಡಿತು.

ಹಿನ್ನೆಲೆ: ಪತ್ನಿ ಹಾಗೂ ಆಕೆಯ ಕುಟುಂಬದ ಸದಸ್ಯರು ಸುಳ್ಳು ಪ್ರಕರಣ ದಾಖಲಿಸಿ ತನಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಡಿ.9ರಂದು ಆಡಿಯೋ ಮಾಡಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಅತುಲ್ ಸುಭಾಷ್‌ (34), ಸುದೀರ್ಘ ಡೆತ್ ನೋಟ್ ಬರೆದು ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದರಿಂದ ಮಾರತಹಳ್ಳಿ ಪೊಲೀಸರು ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ 108 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದರು. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌