ಬೆಂಗಳೂರು : ನಿರ್ಜನ ಪ್ರದೇಶದಲ್ಲಿ ಬಾಂಗ್ಲಾ ಮಹಿಳೆ ಮೇಲೆ ರೇಪ್ ಮಾಡಿ, ಭೀಕರ ಹತ್ಯೆ

KannadaprabhaNewsNetwork |  
Published : Jan 25, 2025, 01:45 AM ISTUpdated : Jan 25, 2025, 08:47 AM IST
ರೇಪ್ | Kannada Prabha

ಸಾರಾಂಶ

ಬಾಂಗ್ಲಾದೇಶ ಮೂಲದ ಮಹಿಳೆಯನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಬಳಿಕ ಹತ್ಯೆ ಮಾಡಿರುವ ಪೈಶಾಚಿಕ ಘಟನೆ ರಾಮಮಮೂರ್ತಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಬಾಂಗ್ಲಾದೇಶ ಮೂಲದ ಮಹಿಳೆಯನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಬಳಿಕ ಹತ್ಯೆ ಮಾಡಿರುವ ಪೈಶಾಚಿಕ ಘಟನೆ ರಾಮಮಮೂರ್ತಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊತ್ತನೂರಿನ ಕೃಷ್ಣಪ್ಪ ಲೇಔಟ್‌ ನಿವಾಸಿ ನಜ್ಮಾ (28) ಕೊಲೆಯಾದ ದುರ್ದೈವಿ. ಗುರುವಾರ ಸಂಜೆಯ ನಂತರ ಈ ಘಟನೆ ನಡೆದಿದ್ದು, ಶುಕ್ರವಾರ ಬೆಳಗ್ಗೆ ದಾರಿಹೋಕರು ಅಪರಿಚಿತ ಮೃತದೇಹ ಕಂಡು 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಬಾಂಗ್ಲಾದೇಶ ಮೂಲದ ಸುಮನ್‌ ಮತ್ತು ನಜ್ಮಾ ದಂಪತಿ ಮೂವರು ಮಕ್ಕಳೊಂದಿಗೆ ಕಳೆದ 6 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಸುಮನ್‌ ಬಿಬಿಎಂಪಿ ಕಸದ ಯಾರ್ಡ್‌ನಲ್ಲಿ ಕಸ ಬೇರ್ಪಡಿಸುವ ಕೆಲಸ ಮಾಡುತ್ತಾನೆ. ನಜ್ಮಾ ಕಲ್ಕೆರೆಯ ಡಿಎಸ್‌ಆರ್‌ ಅಪಾರ್ಟ್‌ಮೆಂಟ್‌ನಲ್ಲಿ ಮನೆಗೆಲಸ ಮಾಡುತ್ತಿದ್ದರು. ಗುರುವಾರವೂ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದ ಬಳಿಕ ಸಂಜೆ ಮನೆಗೆ ಹೊರಟಿದ್ದಾರೆ. ಕಲ್ಕೆರೆ ಕೆರೆ ಬಳಿ ನಡೆದು ಹೋಗುವಾಗ ದುಷ್ಕರ್ಮಿಗಳು ನಜ್ಮಾ ಅವರನ್ನು ನಿರ್ಜನಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿ ಬಳಿಕ ಉಸಿರುಗಟ್ಟಿಸಿ, ಕಲ್ಲಿನಿಂದ ಮುಖದ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಪತಿಯಿಂದ ಹುಡುಕಾಟ:

ರಾತ್ರಿಯಾದರೂ ಪತ್ನಿ ನಜ್ಮಾ ಮನೆಗೆ ಬಂದಿರಲಿಲ್ಲ. ಹಲವು ಬಾರಿ ಮೊಬೈಲ್‌ ಕರೆ ಮಾಡಿದರೂ ಕರೆ ಸ್ವೀಕರಿಸದೇ ಇದ್ದಾಗ ಆತಂಕಗೊಂಡ ಪತಿ ಸುಮನ್‌ ಎಲ್ಲೆಡೆ ಹುಡುಕಾಡಿದ್ದು, ಪರಿಚಿತರಿಗೂ ಕರೆ ಮಾಡಿ, ಅಪಾರ್ಟ್‌ಮೆಂಟ್‌ಗೂ ಬಂದು ವಿಚಾರಿಸಿದ್ದಾನೆ. ಎಲ್ಲಿಯೂ ಮಾಹಿತಿ ಸಿಗದಾಗ ರಾತ್ರಿ ಕೊತ್ತನೂರು ಪೊಲೀಸ್‌ ಠಾಣೆಗೆ ತೆರಳಿ ಪತ್ನಿ ನಾಪತ್ತೆ ಬಗ್ಗೆ ಮಾಹಿತಿ ನೀಡಿದ್ದಾನೆ. ಬಳಿಕ ಕೊತ್ತನೂರು ಪೊಲೀಸರು ರಾಮಮೂರ್ತಿನಗರ ಠಾಣೆಗೆ ಕಳುಹಿಸಿದ್ದಾರೆ.

ದಾರಿಹೋಕರಿಂದ ಮಾಹಿತಿ:

ಶುಕ್ರವಾರ ಬೆಳಗ್ಗೆ 8.45ಕ್ಕೆ ದಾರಿಹೋಕರು ಕಲ್ಕೆರೆ ಕೆರೆ ದಡದ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಕಂಡು 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿ ಮೇರೆಗೆ ಶ್ವಾನದಳ, ಎಫ್‌ಎಸ್‌ಎಲ್‌ ತಜ್ಞರ ತಂಡ ಹಾಗೂ ಪೂರ್ವ ವಿಭಾಗದ ಡಿಸಿಪಿ ದೇವರಾಜ್‌ ಮತ್ತು ಜಂಟಿ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದರು.

ಗುರುತು ಪತ್ತೆ ಹಚ್ಚಿದ ಪತಿ:

ಸುಮನ್‌ ಅವರನ್ನು ಘಟನಾ ಸ್ಥಳಕ್ಕೆ ಕರೆಸಿ ಮೃತದೇಹವನ್ನು ತೋರಿಸಿದಾಗ ಇದು ಪತ್ನಿ ನಜ್ಮಾಳ ಮೃತದೇಹವೇ ಎಂದು ಗುರುತು ಹಿಡಿದಿದ್ದಾನೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ದುಷ್ಕರ್ಮಿಗಳು ಮಹಿಳೆ ಮೇಲೆ ಅತ್ಯಾಚಾರ ಮಾಡಿ ಬಳಿಕ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಆಗಿದೆಯೋ ಅಥವಾ ಇಲ್ಲವೋ ಎಂಬುದು ಖಚಿತವಾಗಲಿದೆ. ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮಹಿಳೆ ಹತ್ಯೆಯ ಉದ್ದೇಶ ತಿಳಿದು ಬಂದಿಲ್ಲ. ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಮಹಿಳೆ ತಮ್ಮ ಪತಿ ಸುಮನ್‌ ಪಾಸ್‌ಪೋರ್ಟ್‌ ಮೂಲಕವೇ ಭಾರತಕ್ಕೆ ಬಂದಿದ್ದು, ಆಕೆಯ ಬಳಿ ಪಾಸ್‌ಪೋರ್ಟ್‌ ಇಲ್ಲ. ಹಾಗಾಗಿ ಮೃತ ಮಹಿಳೆ ಅಕ್ರಮವಾಗಿ ಭಾರತಕ್ಕೆ ಬಂದಿರುವ ಸಾಧ್ಯತೆಯಿದೆ. ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸೆಗಿ ಬಳಿಕ ಮಹಿಳೆಯ ಹತ್ಯೆ ಮಾಡಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

। ರಮೇಶ್‌ ಬಾನೋತ್‌, ಪೂರ್ವ ವಲಯದ ಜಂಟಿ ಪೊಲೀಸ್‌ ಆಯುಕ್ತ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಹಲಗೂರು: ಚಿರತೆ ದಾಳಿಗೆ ಕರು ಬಲಿ
6 ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೊಲೀಸ್ ಹಲ್ಲೆ? ಬಲವಂತದ ಸಾಕ್ಷಿ ವಿಡಿಯೋ ಚಿತ್ರಿಕರಣ