ಬೆಂಗಳೂರು : ಕಾರಿನ ಸಾಲದ ಬಾಕಿ ಕಂತಿನ ವಸೂಲಿಗೆ ಹೋಗಿದ್ದ ಖಾಸಗಿ ಬ್ಯಾಂಕ್ ನೌಕರನ ಮೇಲೆ ವ್ಯಕ್ತಿಯೊಬ್ಬ ಕಲ್ಲಿನಿಂದ ಹಲ್ಲೆ ಮಾಡಿದ ಆರೋಪದಡಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಬ್ಯಾಂಕ್ ನೌಕರ ಬಿ.ಎಂ.ಚಂದನ್ (27) ಹಲ್ಲೆಗೆ ಒಳಗಾದವರು. ಏ.1ರಂದು ಬೆಳಗ್ಗೆ ಸುಮಾರು 11.30ಕ್ಕೆ ನಾಗರಬಾವಿ 2ನೇ ಹಂತದ ಅನ್ನಪೂರ್ಣೇಶ್ವರಿನಗರ ಬಿಡಿಎ ಕಾಂಪ್ಲೆಕ್ಸ್ ಬಳಿ ಈ ಘಟನೆ ನಡೆದಿದೆ. ಗಾಯಾಳು ಚಂದನ್ ನೀಡಿದ ದೂರಿನ ಮೇರೆಗೆ ಆರೋಪಿ ರಮೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಘಟನೆ ವಿವರ:
ರಮೇಶ್ ತಮ್ಮ ಮಗಳ ಹೆಸರಿನಲ್ಲಿ ಖಾಸಗಿ ಬ್ಯಾಂಕಿನಲ್ಲಿ ಕಾರಿನ ಸಾಲ ಪಡೆದಿದ್ದರು. ಕಳೆದ ನಾಲ್ಕು ತಿಂಗಳಿಂದ ಕಂತು ಪಾವತಿಸಿರಲಿಲ್ಲ. ಹೀಗಾಗಿ ಏ.1ರಂದು ಬ್ಯಾಂಕ್ ನೌಕರ ಚಂದನ್ ಬಾಕಿಕಂತು ವಸೂಲಿಗೆ ರಮೇಶ್ ಅವರ ಮನೆಗೆ ಬಳಿಗೆ ತೆರಳಿದ್ದಾರೆ. ಈ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ರಮೇಶ್, ಏಕಾಏಕಿ ಚಂದನ್ ಅವರ ಎರಡು ಮೊಬೈಲ್‌ಗಳನ್ನು ಕಿತ್ತುಕೊಂಡು ಒಡೆದು ಹಾಕಿದ್ದಾರೆ. ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಚಂದನ್ ಅವರ ತಲೆಗೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಚಂದನ್ ಅವರ ತಲೆಯಲ್ಲಿ ಗಾಯವಾಗಿ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳೀಯರು ಜಗಳ ಬಿಡಿಸಿ ಚಂದನ್ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಹಲ್ಲೆ ಸಂಬಂಧ ರಮೇಶ್ ವಿರುದ್ಧ ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.