ಟಿಪ್ಪರ್‌ ಲಾರಿ ಡಿಕ್ಕಿಯಾಗಿ ಬಿಬಿಎಂಪಿ ಪೌರಕಾರ್ಮಿಕ ಮಹಿಳೆ ಬಲಿ

KannadaprabhaNewsNetwork | Published : Apr 30, 2025 2:03 AM

ಸಾರಾಂಶ

ರಸ್ತೆ ದಾಟುವಾಗ ಟಿಪ್ಪರ್‌ ಲಾರಿ ಡಿಕ್ಕಿಯಾಗಿ ಬಿಬಿಎಂಪಿ ಪೌರಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆ ದಾಟುವಾಗ ಟಿಪ್ಪರ್‌ ಲಾರಿ ಡಿಕ್ಕಿಯಾಗಿ ಬಿಬಿಎಂಪಿ ಪೌರಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀರಾಮಪುರದ ಅರುಂಧತಿನಗರ ನಿವಾಸಿ ಸರೋಜಾ(50) ಮೃತ ದುರ್ದೈವಿ. ಮಂಗಳವಾರ ಬೆಳಗ್ಗೆ ಸುಮಾರು 6.30ಕ್ಕೆ ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್ ರಸ್ತೆಯ ಶಿವನಗರ ಮೇಲ್ಸೇತುವೆ ಬಳಿ ದೋಬಿಘಾಟ್‌ ಜಂಕ್ಷನ್‌ ಸಿಗ್ನಲ್‌ನಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ಬಳಿಕ ಟಿಪ್ಪರ್‌ ಲಾರಿ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಟಿಪ್ಪರ್‌ ವಾಹನ ಜಪ್ತಿ ಮಾಡಿದ್ದು, ಚಾಲಕ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸರೋಜಾ, ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಬಯೋ ಮೆಟ್ರಿಕ್‌ ಹಾಜರಾತಿ ನೀಡಲು ವಾರ್ಡ್‌ ಕಚೇರಿಗೆ ತೆರಳಲು ಬಸವೇಶ್ವರನಗರ ತಿಮ್ಮಯ್ಯ ರಸ್ತೆ ಕಡೆಯಿಂದ ವಾರಿಯರ್‌ ಬೇಕರಿ ಕಡೆಗೆ ರಸ್ತೆ ದಾಟುತ್ತಿದ್ದರು. ಇದೇ ವೇಳೆ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಸರ್ವಿಸ್‌ ರಸ್ತೆಯಲ್ಲಿ ಎಸ್‌ಪಿಎಸ್‌ ಸ್ಕೂಲ್‌ ಕಡೆಯಿಂದ ರಾಜಾಜಿನಗರದ ಕಡೆಗೆ ಹೋಗಲು ದೋಬಿಘಾಟ್‌ ಸಿಗ್ನಲ್‌ನಿಂದ ವೇಗವಾಗಿ ಬಂದ ಟಿಪ್ಪರ್‌ ಲಾರಿ ರಸ್ತೆ ದಾಟುತ್ತಿದ್ದ ಸರೋಜಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಸರೋಜಾ ತಲೆ ಮೇಲೆಯೇ ಆ ಟಿಪ್ಪರ್‌ನ ಮುಂದಿನ ಚಕ್ರ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದರು. ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಿದ್ದಾರೆ. ಘಟನೆ ಬಳಿಕ ಟಿಪ್ಪರ್‌ ಲಾರಿ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಆತನ ಸುಳಿವು ಸಿಕ್ಕಿದ್ದು ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ವಿಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article