ಖಾಸಗಿ ಆಸ್ತಿ ಸೀಜ್ ಮಾಡಿ, ಮಾಲೀಕರಿಗೆ ಆಸ್ತಿ ಹರಾಜು ಹಾಕುವ ಬೆದರಿಕೆ ಹಾಕಿ ಬಾಕಿ ತೆರಿಗೆ ವಸೂಲಿ ಮಾಡುತ್ತಿರುವ ಬಿಬಿಎಂಪಿಯು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಇಲಾಖೆಗಳ ಕಟ್ಟಡಗಳಿಂದಲೂ ವಸೂಲಿಗೆ ಸಿದ್ಧತೆ ಆರಂಭಿಸಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಖಾಸಗಿ ಆಸ್ತಿ ಸೀಜ್ ಮಾಡಿ, ಮಾಲೀಕರಿಗೆ ಆಸ್ತಿ ಹರಾಜು ಹಾಕುವ ಬೆದರಿಕೆ ಹಾಕಿ ಬಾಕಿ ತೆರಿಗೆ ವಸೂಲಿ ಮಾಡುತ್ತಿರುವ ಬಿಬಿಎಂಪಿಯು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಇಲಾಖೆಗಳ ಕಟ್ಟಡಗಳಿಂದಲೂ ವಸೂಲಿಗೆ ಸಿದ್ಧತೆ ಆರಂಭಿಸಿದೆ. ಆದರೆ, ವಿಧಾನಸೌಧ, ವಿಕಾಸಸೌಧ ಸೇರಿದಂತೆ ಕೋಟ್ಯಾಂತರ ರು. ಆಸ್ತಿ ತೆರಿಗೆ ಬಾಕಿ ಉಳಿಕೊಂಡಿರುವ ಸರ್ಕಾರಿ ಕಟ್ಟಡಗಳಿಂದಲೂ ಆಸ್ತಿ ತೆರಿಗೆ ವಸೂಲಿ ಮಾಡುವುದೋ ಅಥವಾ ಘೋಷಣೆಗೆ ಸೀಮಿತವಾಗುವುದೋ ಎಂಬ ಕುತೂಹಲವಿದೆ.
ನಗರದಲ್ಲಿ ಖಾಸಗಿ ಆಸ್ತಿ ಮಾಲೀಕರಿಂದ ತೆರಿಗೆ ವಸೂಲಿಗೆ ನಾನಾ ಅಸ್ತ್ರ ಬಳಸುತ್ತಿರುವ ಬಿಬಿಎಂಪಿಯ ಅಧಿಕಾರಿಗಳು, ಇದೀಗ ಸರ್ಕಾರಿ ಕಚೇರಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವುದಾಗಿ ಹೇಳುತ್ತಿದ್ದಾರೆ. ಆದರೆ, ಈ ಹಿಂದೆ ಹಲವು ಅಧಿಕಾರಿಗಳು ಸರ್ಕಾರಿ ಇಲಾಖೆಗಳಿಗೆ ನೋಟಿಸ್ ಕೊಟ್ಟು ಬಾಕಿ ಇರುವ ತೆರಿಗೆ ಪಾವತಿ ಮಾಡುವಂತೆ ಸೂಚಿಸಿದರೂ ಬಿಬಿಎಂಪಿಯ ಅಧಿಕಾರಿಗಳಿಗೆ ಕ್ಯಾರೆ ಎಂದಿಲ್ಲ.
ಇತ್ತಿಚಿಗೆಷ್ಟೇ ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳೇ 2008 ರಿಂದ ಈವರೆಗೆ ಸುಮಾರು ₹7 ಕೋಟಿ ಆಸ್ತಿ ತೆರಿಗೆ ಬಾಕಿ ಇದೆ. ಅದನ್ನು ಪಾವತಿ ಮಾಡಿ ಎಂದು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದ ಪಾಲಿಕೆಗೆ ಯಾವುದೇ ಪ್ರಯೋಜವಾಗಿಲ್ಲ. ಅಂತಹದರಲ್ಲಿ ಸರ್ಕಾರಿ ಇಲಾಖೆಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಬಿಬಿಎಂಪಿಯಿಂದ ವಸೂಲಿ ಸಾಧ್ಯವೇ? ಎಂಬ ಪ್ರಶ್ನೆ ಹುಟ್ಟಿದೆ. ಆದರೆ, ಅಧಿಕಾರಿಗಳು ಈ ಬಾರಿ ಕೆಲವು ಕಾರ್ಯ ತಂತ್ರಗಳನ್ನು ರೂಪಿಸಿಕೊಂಡು ವಸೂಲಿಗೆ ಮುಂದಾಗಿರುವುದಾಗಿ ಹೇಳುತ್ತಾರೆ. ಖಾಸಗಿ ಮಾದರಿಯಲ್ಲಿಯೇ ಸರ್ಕಾರದ ವಿವಿಧ ಇಲಾಖೆಯಿಂದ ಬರಬೇಕಾದ ತೆರಿಗೆ ವಸೂಲಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಿಯಮಾನುಸಾರ ಆಸ್ತಿ ತೆರಿಗೆ ಬಾಕಿ ಪಾವತಿಸುವಂತೆ ನೋಟಿಸ್ ನೀಡುವುದು. ಅಗತ್ಯ ಬಿದ್ದರೆ ಸೀಜ್ ಮಾಡಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳುತ್ತಾರೆ.
ಈ ಅಧಿಕಾರಿಗಳ ಪ್ರಕಾರ ವಲಯವಾರು ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಖಾಸಗಿ ಆಸ್ತಿ ಮಾಲೀಕರನ್ನು ಪಟ್ಟಿ ಮಾಡುವ ರೀತಿಯಲ್ಲಿ ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಸರ್ಕಾರಿ ಇಲಾಖೆ ಹಾಗೂ ಅಂಗ ಸಂಸ್ಥೆಗಳ ಪಟ್ಟಿ ಸಿದ್ಧಪಡಿಸುವುದಕ್ಕೆ ಕಂದಾಯ ಉಪ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಟ್ಟಿ ಸಿದ್ಧವಾಗುತ್ತಿದಂತೆ ಆಯಾ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದು ಬಾಕಿ ಇರುವ ಆಸ್ತಿ ತೆರಿಗೆ ಪಾವತಿ ಮಾಡುವಂತೆ ತಿಳಿಸುವುದಕ್ಕೆ ನಿರ್ಧರಿಸಲಾಗಿದೆಯಂತೆ.
ಒಟಿಎಸ್ ಲಾಭ ಪಡೆಯದ ಸರ್ಕಾರಿ ಇಲಾಖೆಗಳು:
ವಿಧಾನಸೌಧ, ವಿಕಾಸಸೌಧದ ಕಟ್ಟಡಗಳ ನಿರ್ವಹಣೆ ಮಾಡುವ ಇಲಾಖೆಯು ಸೇರಿದಂತೆ ಪಾಲಿಕೆ ವ್ಯಾಪ್ತಿಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಹುತೇಕ ಇಲಾಖೆಗಳು ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ‘ಒನ್ ಟೈಮ್ ಸೆಟಲ್ ಮೆಂಟ್’ (ಒಟಿಎಸ್) ಯೋಜನೆಯ ಲಾಭ ಪಡೆದುಕೊಂಡಿಲ್ಲ, ಈ ಯೋಜನೆಯಡಿ ಬಿಬಿಎಂಪಿಯ ಆಸ್ತಿ ತೆರಿಗೆ ಬಡ್ಡಿ ಹಾಗೂ ದಂಡ ಮನ್ನಾ ಮಾಡಿತ್ತು. ಸಾಕಷ್ಟು ಖಾಸಗಿ ಕಂಪನಿಗಳು ಲಾಭ ಪಡೆದು ಶೇ.50 ರಷ್ಟು ಉಳಿತಾಯ ಮಾಡಿಕೊಂಡಿವೆ.