ಸಾರಾಂಶ
ಐಟಿಐ ವಿದ್ಯಾರ್ಥಿಗೆ ಬೆದರಿಸಿ ಮೊಬೈಲ್ ದೋಚಿ ಪರಾರಿಯಾಗಿದ್ದ ಇಬ್ಬರು ಕಿಡಿಗೇಡಿಗಳನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಐಟಿಐ ವಿದ್ಯಾರ್ಥಿಗೆ ಬೆದರಿಸಿ ಮೊಬೈಲ್ ದೋಚಿ ಪರಾರಿಯಾಗಿದ್ದ ಇಬ್ಬರು ಕಿಡಿಗೇಡಿಗಳನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಪ್ರತಾಪ್ ಹಾಗೂ ಶ್ರೀನಿವಾಸಪುರ ಕಾಲೋನಿಯ ಮಾದೇಶ್ ಬಂಧಿತರಾಗಿದ್ದು, ಆರೋಪಿಗಳಿಂದ ಮೊಬೈಲ್ ಜಪ್ತಿ ಮಾಡಲಾಗಿದೆ. ಮೂರು ದಿನಗಳ ಹಿಂದೆ ಕೆಂಗೇರಿ ಹತ್ತಿರದ ಗಾಣಕಲ್ಲು ಬಳಿ ವಿದ್ಯಾರ್ಥಿ ಶರತ್‌ಗೆ ಬೆದರಿಸಿ ದುಷ್ಕರ್ಮಿಗಳು ಮೊಬೈಲ್ ದೋಚಿದ್ದರು. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಪೊಲೀಸರು, ಮೊಬೈಲ್ ಟವರ್ ಲೋಕೇಷನ್ ಆಧರಿಸಿ ಸುಲಿಗೆಕೋರರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅರವಿಂದ್ ಮೋಟಾರ್ಸ್ ಕಂಪನಿಯಲ್ಲಿ ಐಟಿಐ ಟ್ರೇನಿಂಗ್ ಪಡೆಯಲು ಕೊಡಗು ಜಿಲ್ಲೆಯ ಶರತ್ ನಗರಕ್ಕೆ ಬಂದಿದ್ದು, ಶ್ರೀನಿವಾಸಪುರ ಕಾಲೋನಿಯ ಗಾಣಕಲ್ ಮುಖ್ಯರಸ್ತೆಯಲ್ಲಿ ಸ್ನೇಹಿತರ ಜತೆ ನೆಲೆಸಿದ್ದ. ತನ್ನ ರೂಮ್ ಸಮೀಪ ಭಾನುವಾರ ರಾತ್ರಿ ಊಟ ಮುಗಿಸಿ ಗೆಳೆಯರ ಜತೆ ಶರತ್ ಮರಳುತ್ತಿದ್ದ. ಆ ವೇಳೆ ಶರತ್ ಹಾಗೂ ಆತನ ಸ್ನೇಹಿತರನ್ನು ಅಡ್ಡಗಟ್ಟಿ ಬೆದರಿಸಿ ಮೊಬೈಲ್‌ಗಳ ದೋಚಿದ್ದಲ್ಲದೆ ಗೂಗಲ್ ಪೇ ಮೂಲಕ ಹಣ ವರ್ಗಾಯಿಸಿಕೊಂಡು ಆರೋಪಿಗಳು ಕಾಲ್ಕಿತ್ತಿದ್ದರು. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಸುಲಿಗೆಕೋರರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.