ಸಾರಾಂಶ
ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಜೆ.ಬಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಜೆ.ಬಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.ಕುಳ್ಳಪ್ಪ ಕಾಲೋನಿಯ ನಿವಾಸಿ ಅನುಶ್ರೀ (9) ಮೃತ ದುರ್ದೈವಿ. ಘಟನೆ ಸಂಬಂಧ ವಾಟರ್ ಟ್ಯಾಂಕರ್ ಬಿಟ್ಟು ಪರಾರಿಯಾಗಿರುವ ಚಾಲಕನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಯಾದಗಿರಿ ಜಿಲ್ಲೆ ವಡಿಗೇರ ತಾಲೂಕು ತುಮಕೂರು ಗ್ರಾಮದ ತಿಮ್ಮಪ್ಪ ಕುಟುಂಬದ ಜತೆ ಕುಳ್ಳಪ್ಪ ಕಾಲೋನಿಯಲ್ಲಿ ನೆಲೆಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆ ಸಮೀಪ ರಸ್ತೆ ಬದಿ ಬೆಳಗ್ಗೆ 11.30ರಲ್ಲಿ ಅನುಶ್ರೀ ನಿಂತಿದ್ದ ವೇಳೆ ಬಾಲಕಿಗೆ ಕೃಷ್ಣಾ ರೆಡ್ಡಿ ಲೇಔಟ್ ಕಡೆಯಿಂದ ಬಂದ ವಾಟರ್ ಟ್ಯಾಂಕರ್ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.