ಬೆಂಗಳೂರು : ಹೊಸಕೋಟೆ ಬಿರಿಯಾನಿ ತಿನ್ನಲು ಹೋಗುವಾಗ ಮಾರ್ಗ ಮಧ್ಯೆ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯ ಮೂಲದ ನಿಶಾಂತ್(21) ಮೃತ ಸವಾರ. ಈತನ ಸ್ನೇಹಿತ ಚಿದಾನಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶನಿವಾರ ಮುಂಜಾನೆ ಸುಮಾರು 2.45ಕ್ಕೆ ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡ್ಯ ಮೂಲದ ನಿಶಾಂತ್ ಮೈಸೂರು ರಸ್ತೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ವ್ಯಾಸಂಗ ಮಾಡುತ್ತಿದ್ದ. ಚನ್ನಸಂದ್ರದ ಪೇಯಿಂಗ್ ಗೆಸ್ಟ್‌ನಲ್ಲಿ (ಪಿಜಿ) ಉಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದ. ಶನಿವಾರ ಮುಂಜಾನೆ ನಿಶಾಂತ್, ಚಿದಾನಂದ ಸೇರಿ ಕಾಲೇಜಿನ ನಾಲ್ವರು ಸ್ನೇಹಿತರು ಹೊಸಕೋಟೆ ಬಿರಿಯಾನಿ ತಿನ್ನಲು ಎರಡು ದ್ವಿಚಕ್ರ ವಾಹನಗಳಲ್ಲಿ ಮೈಸೂರು ರಸ್ತೆಯ ಚನ್ನಸಂದ್ರದಿಂದ ಹೊಸಕೋಟೆ ಕಡೆಗೆ ಹೊರಟ್ಟಿದ್ದರು.
ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ:
ಮೈಸೂರು ರಸ್ತೆ ಕಡೆಯಿಂದ ಕೆ.ಆರ್.ಮಾರ್ಕೆಟ್ ಕಡೆಗೆ ಬಿಜಿಎಸ್ ಮೇಲ್ಸೇತುವೆಯಲ್ಲಿ ಬರುವಾಗ ನಿಶಾಂತ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಶಾಂತ್ ಹಾಗೂ ಚಿದಾನಂದ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ನಿಶಾಂತ್ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಚಿದಾನಂದನ ಕೈಗೆ ಗಾಯಗಳಾಗಿವೆ. ಬಳಿಕ ಸ್ನೇಹಿತರು ಚಿದಾನಂದನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಿಶಾಂತ್‌ನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಶನಿವಾರ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.