ಕನ್ನಡಪ್ರಭ ವಾರ್ತೆ ಬೆಂಗಳೂರು
ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಕಾರು ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕ ಕಾರನ್ನು ಎಡಕ್ಕೆ ತಿರುಗಿಸಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಲುಗಡೆ ಮಾಡಿದ್ದ 6 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ನಾಗರಬಾವಿ ಸಮೀಪದ ಅಂಬೇಡ್ಕರ್ ಕಾಲೇಜು ಸಿಗ್ನಲ್ ಬಳಿ ಶುಕ್ರವಾರ ರಾತ್ರಿ 9.20ಕ್ಕೆ ಈ ಘಟನೆ ನಡೆದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಕುಳಿತಿದ್ದ ಉತ್ತರಪ್ರದೇಶ ಮೂಲದ ರಾಜ್‌ದೇವ್ (31) ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದಲ್ಲಿ ಡಿಕ್ಕಿ ಹೊಡೆದ ಕಾರು ಮತ್ತು 6 ದ್ವಿಚಕ್ರ ಸೇರಿ ಒಟ್ಟು 7 ವಾಹನಗಳು ಜಖಂಗೊಂಡಿವೆ. ಘಟನೆ ಸಂಬಂಧ ಕಾರು ಚಾಲಕ ಆಂಧ್ರಹಳ್ಳಿ ಮುಖ್ಯರಸ್ತೆಯ ಪವನ್(27) ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರು ಚಾಲಕ ಪವನ್ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 9.20ಕ್ಕೆ ತಮ್ಮ ಕಾರಿನಲ್ಲಿ ಅಂಬೇಡ್ಕರ್ ಕಾಲೇಜು ಕಡೆಯಿಂದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಕಡೆಗೆ ಹೊರಟ್ಟಿದ್ದರು. ಈ ವೇಳೆ ಪಾದಾಚಾರಿಯೊಬ್ಬ ಏಕಾಏಕಿ ರಸ್ತೆ ದಾಟಲು ಮುಂದಾದಾಗ ವೇಗವಾಗಿ ಬರುತ್ತಿದ್ದ ಕಾರು ಆತನಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕ ಪವನ್ ಏಕಾಏಕಿ ಕಾರನ್ನು ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಲುಗಡೆ ಮಾಡಿದ್ದ ಆರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ನಿಂತಿದೆ. ಇದೇ ವೇಳೆ ದ್ವಿಚಕ್ರ ವಾಹನದ ಮೇಲೆ ಕುಳಿತ್ತಿದ್ದ ಉತ್ತರಪ್ರದೇಶ ಮೂಲದ ರಾಜ್ ದೇವ್ ಕಾಲುಗಳಿಗೂ ಪೆಟ್ಟು ಬಿದ್ದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು, ಸ್ಥಳೀಯರ ನೆರವಿನಿಂದ ಪಾದಾಚಾರಿ ರಾಜ್ ದೇವ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅಪಘಾತ ಎಸೆದ ಕಾರು ಹಾಗೂ ಡಿಕ್ಕಿಯಿಂದ ಹಾನಿಯಾದ ಆರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಕಾರು ಚಾಲಕ ಪವನ್‌ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.