ಹೂಡಿಕೆ ನೆಪದಲ್ಲಿ ಮಹಿಳೆಗೆ ₹18 ಲಕ್ಷ ವಂಚನೆ: ಸೈಬರ್‌ ವಂಚಕರ ವಿರುದ್ಧ ಎಫ್‌ಐಆರ್‌

KannadaprabhaNewsNetwork | Updated : Apr 13 2025, 04:27 AM IST

ಸಾರಾಂಶ

ವಾಟ್ಸಾಪ್‌ನಲ್ಲಿ ಪಾರ್ಟ್‌ ಟೈಂ ಜಾಬ್‌ ಸೋಗಿನಲ್ಲಿ ಮಹಿಳೆಯೊಬ್ಬರನ್ನು ಸಂಪರ್ಕಿಸಿ ಅಧಿಕ ಲಾಭದ ಆಮಿಷವೊಡ್ಡಿ ಹೂಡಿಕೆ ನೆಪದಲ್ಲಿ ₹18 ಲಕ್ಷ ಪಡೆದು ವಂಚಿಸಿದ ಆರೋಪದಡಿ ವೈಟ್‌ಫೀಲ್ಡ್‌ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಬೆಂಗಳೂರು : ವಾಟ್ಸಾಪ್‌ನಲ್ಲಿ ಪಾರ್ಟ್‌ ಟೈಂ ಜಾಬ್‌ ಸೋಗಿನಲ್ಲಿ ಮಹಿಳೆಯೊಬ್ಬರನ್ನು ಸಂಪರ್ಕಿಸಿ ಅಧಿಕ ಲಾಭದ ಆಮಿಷವೊಡ್ಡಿ ಹೂಡಿಕೆ ನೆಪದಲ್ಲಿ ₹18 ಲಕ್ಷ ಪಡೆದು ವಂಚಿಸಿದ ಆರೋಪದಡಿ ವೈಟ್‌ಫೀಲ್ಡ್‌ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರತಹಳ್ಳಿ ಬಸವನಗರ ನಿವಾಸಿ ತಂಗಂ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ದೂರುದಾರೆ ತಂಗಂ ಅವರ ವಾಟ್ಸಾಪ್‌ಗೆ ಇತ್ತೀಚೆಗೆ ಅಪರಿಚಿತ ವ್ಯಕ್ತಿ ಪಾರ್ಟ್‌ ಟೈಂ ಜಾಬ್‌ ಸಂಬಂಧ ಸಂದೇಶ ಕಳುಹಿಸಿ ಕೆಲ ಟಾಸ್ಕ್‌ಗಳನ್ನು ನೀಡಿ ಅವರ ಮೊಬೈಲ್‌ ಸಂಖ್ಯೆಯನ್ನು ವಾಟ್ಸಾಪ್‌ ಗ್ರೂಪ್‌ವೊಂದಕ್ಕೆ ಸೇರಿಸಿದ್ದ. ಬಳಿಕ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಲಿಂಕ್‌ವೊಂದನ್ನು ಕಳುಹಿಸಿ ರಿಜಿಸ್ಟರ್‌ ಆಗಲು ಸೂಚಿಸಿದ್ದಾರೆ. ಇದನ್ನು ನಂಬಿದ ತಂಗಂ ಆ ಲಿಂಕ್‌ ಬಳಿಸಿ ರಿಜಿಸ್ಟರ್‌ ಆಗಿದ್ದಾರೆ. ಆರಂಭಿಕವಾಗಿ ₹5 ಸಾವಿರ, ₹10 ಸಾವಿರ, ₹50 ಸಾವಿರ ಹೂಡಿಕೆ ಮಾಡಿಸಿಕೊಂಡು ₹300 ಲಾಭಾಂಶ ನೀಡಿದ್ದಾರೆ. ಅಧಿಕ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗಲಿದೆ ಎಂದು ಅಪರಿಚಿತರು ತಿಳಿಸಿದ್ದಾರೆ. ಇವರ ಮಾತು ನಂಬಿದ ತಂಗಂ ಹೆಚ್ಚಿನ ಹಣ ಹೂಡಿಕೆಗೆ ಸಮ್ಮತಿಸಿದ್ದು, ವಿವಿಧ ಹಂತಗಳಲ್ಲಿ ₹18 ಲಕ್ಷ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.

ವಿವಿಧ ಹಂತಗಳಲ್ಲಿ 18 ಲಕ್ಷ ರು. ವರ್ಗಾವಣೆ : ಅದರಂತೆ ಅಪರಿಚಿತರು ನೀಡಿದ ಬ್ಯಾಂಕ್‌ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು 18 ಲಕ್ಷ ರು. ವರ್ಗಾಯಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ತಂಗಂಗೆ ಯಾವುದೇ ಲಾಭಾಂಶ ನೀಡಿಲ್ಲ. ಈ ಬಗ್ಗೆ ಕೇಳಿದಾಗ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಬಾಕಿ ಹಣ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ತಂಗಂ ನಿರಾಕರಿಸಿದಾಗ ದುಷ್ಕರ್ಮಿಗಳು ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಹಲವು ಬಾರಿ ಕರೆ ಮಾಡಿ, ಸಂದೇಶ ಕಳುಹಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ವೇಳೆ ತಂಗಂ ಅವರಿಗೆ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಸೈಬರ್‌ ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article