ಬೆಂಗಳೂರು: ಕೆಎಸ್ಸಾರ್ಟಿಸಿ ಬಸ್‌ಗೆ ಬೈಕ್‌ ಸವಾರ ಬಲಿ

KannadaprabhaNewsNetwork | Updated : Feb 13 2024, 08:46 AM IST

ಸಾರಾಂಶ

ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಗಸಂದ್ರ ನಿವಾಸಿ ರಾಜೇಂದ್ರ(54) ಮೃತ ಸವಾರ. ಯಶವಂತಪುರ ಮೆಟ್ರೋ ರೈಲ್ದಾಣದ ಬಳಿ ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದೆ.

ನಾಗೇಂದ್ರ ನೆಲಮಂಗಲದ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರು. ಕಂಪನಿ ಕೆಲಸದ ನಿಮಿತ್ತ ಮೇಖ್ರಿ ವೃತ್ತದ ಜಿಎಸ್‌ಟಿ ಕಚೇರಿಗೆ ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. 

ಯಶವಂತಪುರ ಮೆಟ್ರೋ ರೈಲು ನಿಲ್ದಾಣದ ಕೆಳರಸ್ತೆಯಲ್ಲಿ ತೆರಳುವಾಗ ಎಡಭಾಗದಲ್ಲಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌, ದ್ವಿಚಕ್ರ ವಾಹನದ ಕನ್ನಡಿಗೆ ತಾಕಿದೆ. ಈ ವೇಳೆ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ರಾಜೇಂದ್ರ ರಸ್ತೆಗೆ ಬಿದ್ದಿದ್ದಾರೆ.

 ಆಗ ಬಸ್‌ನ ಎಡಭಾಗದ ಹಿಂಬದಿ ಚಕ್ರಕ್ಕೆ ಸಿಲುಕಿದ ರಾಜೇಂದ್ರನನ್ನು ಸುಮಾರು 25 ಅಡಿಗಳಷ್ಟು ಬಸ್‌ ಎಳೆದುಕೊಂಡು ಮುಂದೆ ಸಾಗಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. 

ಘಟನೆ ಸಂಬಂಧ ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಯಶವಂತಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿಕೆಟ್‌ರಹಿತ ಪ್ರಯಾಣಿಕರು ₹5.71 ಲಕ್ಷ ದಂಡ ವಸೂಲಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಎಸ್ಸಾರ್ಟಿಸಿ ತನಿಖಾ ತಂಡವು ಜನವರಿ ತಿಂಗಳಲ್ಲಿ 3,712 ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿ, ₹5.71 ಲಕ್ಷ ದಂಡ ವಸೂಲಿ ಮಾಡಿದೆ.

ತಂಡವು ಪ್ರತಿ ತಿಂಗಳು ಬಸ್‌ಗಳ ತಪಾಸಣೆ ನಡೆಸಿ ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿ ನಿಗಮಕ್ಕೆ ಆಗುವ ಆದಾಯ ಸೋರಿಕೆಯನ್ನು ತಪ್ಪಿಸುತ್ತದೆ. 

ಅದರಂತೆ ಜನವರಿ ತಿಂಗಳಲ್ಲಿ 44,521 ಬಸ್‌ಗಳನ್ನು ತಪಾಸಣೆಗೆ ಒಳಪಡಿಸಿದ್ದು, 3,721 ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿದೆ. ಅವರಿಂದ ₹5,71,286 ದಂಡ ವಸೂಲಿ ಮಾಡಿ, ನಿಗಮಕ್ಕಾಗುತ್ತಿದ್ದ ₹81,583 ಆದಾಯ ಸೋರಿಕೆಯನ್ನು ತಡೆದಿದೆ.

Share this article