ಬಿಟ್‌ಕಾಯಿನ್‌: ಕಡೂರು ಪೊಲೀಸ್‌ ತರಬೇತಿ ಶಾಲೆಯ ಇನ್ಸ್‌ಪೆಕ್ಟರ್‌ ಲಕ್ಷ್ಮೀಕಾಂತಯ್ಯ ಸೆರೆ

KannadaprabhaNewsNetwork | Updated : Feb 29 2024, 03:39 PM IST

ಸಾರಾಂಶ

ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಿಟಿ ಕಾಯಿನ್‌ ಹಗರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತೊಬ್ಬ ಇನ್ಸ್‌ಪೆಕ್ಟರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಿಟಿ ಕಾಯಿನ್‌ ಹಗರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತೊಬ್ಬ ಇನ್ಸ್‌ಪೆಕ್ಟರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.ಕಡೂರು ಪೊಲೀಸ್‌ ತರಬೇತಿ ಶಾಲೆಯ ಇನ್ಸ್‌ಪೆಕ್ಟರ್‌ ಲಕ್ಷ್ಮೀಕಾಂತಯ್ಯ ಬಂಧಿತ. ಈ ಬಿಟ್‌ ಕಾಯಿನ್‌ ಹಗರಣ ನಡೆದಾಗ ಲಕ್ಷ್ಮೀಕಾಂತಯ್ಯ ಸಿಸಿಬಿ ತನಿಖಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹಗರಣದ ತನಿಖೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ಅದರಂತೆ ಬುಧವಾರ ವಿಚಾರಣೆಗೆ ಹಾಜರಾಗಿದ್ದ ಲಕ್ಷ್ಮೀಕಾಂತಯ್ಯ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದರು. ಬಳಿಕ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿ ಲಕ್ಷ್ಮೀಕಾಂತಯ್ಯ ಅವರನ್ನು ಏಳು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿದೆ.ಕೆಲ ದಿನಗಳ ಹಿಂದೆಯಷ್ಟೇ ಇದೇ ಬಿಟ್‌ ಕಾಯಿನ್‌ ಹಗರಣ ಸಂಬಂಧ ಇನ್ಸ್‌ಪೆಕ್ಟರ್‌ ಪ್ರಶಾಂತ್‌ ಬಾಬು ಮತ್ತು ಸೈಬರ್‌ ತಜ್ಞ ಸಂತೋಷ್‌ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ಆರೋಪಿ ಲಕ್ಷ್ಮೀಕಾಂತಯ್ಯನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಬಿಟ್‌ ಕಾಯಿನ್‌ ಮತ್ತು ಡ್ರಗ್ಸ್‌ ಪ್ರಕರಣದಲ್ಲಿ ಅಂದು ಸಿಸಿಬಿ ತನಿಖಾಧಿಕಾರಿಗಳಾಗಿದ್ದ ಇನ್ಸ್‌ಪೆಕ್ಟರ್‌ಗಳಾದ ಡಿ.ಎಂ.ಪ್ರಶಾಂತ್‌ ಬಾಬು, ಲಕ್ಷ್ಮೀಕಾಂತಯ್ಯ, ಚಂದ್ರಾಧರ ಹಾಗೂ ಶ್ರೀಧರ್‌ ಕೆ.ಪೂಜಾರ್‌(ಹಾಲಿ ಡಿವೈಎಸ್ಪಿ) ಹಾಗೂ ಎಚ್‌ಎಸ್‌ಆರ್‌ ಲೇಔಟ್‌ನ ಜಿಸಿಐಡಿ ಟೆಕ್ನಾಲಜಿಸ್‌ ಪ್ರೈವೆಟ್‌ ಲಿಮಿಟೆಡ್‌ನ ಸಿಇಒ ಎಸ್‌ .ಸಂತೋಷ್‌ ಕುಮಾರ್‌ ವಿರುದ್ಧ ಸಾಕ್ಷ್ಯಾಧಾರಗಳ ನಾಶ ಆರೋಪದಡಿ ಎಸ್‌ಐಟಿ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿದ್ದರು.ಆರೋಪಿಗಳನ್ನು ಅಕ್ರಮ ಬಂಧನದಲ್ಲಿರಿಸಿದ್ದ ಆರೋಪ?ಕೆಂಪೇಗೌಡನಗರ ಪೊಲೀಸ್‌ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಡ್ರಗ್ಸ್‌ ಪ್ರಕರಣ ಸಂಬಂಧ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಮತ್ತು ರಾಬಿನ್‌ ಖಂಡೇವಲಾನ ಬಂಧನವಾಗಿತ್ತು. ಆರೋಪಿಗಳು ಡಾರ್ಕ್‌ ವೆಬ್‌ನಲ್ಲಿ ಬಿಟ್‌ ಕಾಯಿನ್‌ ಬಳಸಿ ಡ್ರಗ್ಸ್‌ ಖರೀದಿಸುತ್ತಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಬಿಟ್‌ ಕಾಯಿನ್‌ ಬಗ್ಗೆ ತನಿಖೆ ಮಾಡಲು ಸಿಸಿಬಿ ಪ್ರಕರಣ ವಹಿಸಲಾಗಿತ್ತು. ಅಂದು ಸಿಸಿಬಿ ತನಿಖಾಧಿಕಾರಿಗಳಾಗಿದ್ದ ಲಕ್ಷ್ಮೀಕಾಂತಯ್ಯ ಹಾಗೂ ಇತರರು ಆರೋಪಿಗಳಾದ ಶ್ರೀಕಿ ಮತ್ತು ರಾಬಿನ್‌ನನ್ನು ಅಕ್ರಮ ಬಂಧನದಲ್ಲಿ ಇರಿಸಿಕೊಂಡು ಸೈಬರ್‌ ತಜ್ಞ ಸಂತೋಷ್‌ ಸಹಾಯದಿಂದ ಆರೋಪಿಗಳ ವ್ಯಾಲೆಟ್‌ನಲ್ಲಿದ್ದ ಬಿಟ್‌ ಕಾಯಿನ್‌ಗಳನ್ನು ವರ್ಗಾವಣೆ ಮಾಡಿಕೊಂಡಿದ್ದರು. ಅಲ್ಲದೆ, ಬೇರೆ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಬಳಿಕ ಆರೋಪಿಗಳ ಲ್ಯಾಪ್‌ಟಾಪ್‌, ಮೊಬೈಲ್‌ಗಳಲ್ಲಿದ್ದ ಮಾಹಿತಿಯನ್ನು ಹಲವು ಬಾರಿ ತಿರುಚಿರುವ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್‌) ವರದಿ ನೀಡಿತ್ತು. ಇದರ ಆಧಾರದ ಮೇಲೆ ಅಂದಿನ ಸಿಸಿಬಿ ತನಿಖಾಧಿಕಾರಿಗಳ ಮೇಲೆ ಎಸ್ಐಟಿ ಅಧಿಕಾರಿಗಳು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಈವರೆಗೆ ಇಬ್ಬರು ಇನ್ಸ್‌ಪೆಕ್ಟರ್‌ಗಳು ಸೇರಿ ಮೂವರ ಬಂಧನವಾಗಿದೆ. ಈ ಬಿಟ್‌ ಕಾಯಿನ್‌ ಹಗರಣದಲ್ಲಿ ಮತ್ತಷ್ಟು ಪೊಲೀಸ್‌ ಅಧಿಕಾರಿಗಳ ಬಂಧನವಾಗುವ ಸಾಧ್ಯತೆಯಿದೆ.

Share this article