ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳಲ್ಲಿ 250 ಮಹಿಳೆಯರಿಗೆ ಮದುವೆ ಆಗುವುದಾಗಿ ‘ಅಂಕಲ್‌’ ಟೋಪಿ!

KannadaprabhaNewsNetwork |  
Published : Feb 29, 2024, 02:01 AM ISTUpdated : Feb 29, 2024, 10:39 AM IST
matrimony sites

ಸಾರಾಂಶ

ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆ ತೆರೆದು ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿ ಸಾವಿರಾರು ರುಪಾಯಿ ಪಡೆದು ವಂಚಿಸುತ್ತಿದ್ದ ಖತರ್ನಾಕ್‌ ವಂಚಕನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆ ತೆರೆದು ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿ ಸಾವಿರಾರು ರುಪಾಯಿ ಪಡೆದು ವಂಚಿಸುತ್ತಿದ್ದ ಖತರ್ನಾಕ್‌ ವಂಚಕನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಕಾಟನ್‌ಪೇಟೆ ನಿವಾಸಿ ನರೇಶ್‌ಪುರಿ ಗೋಸ್ವಾಮಿ(47) ಬಂಧಿತ. ಇತ್ತೀಚೆಗೆ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ತಮಿಳುನಾಡಿನ ಕೊಯಮತ್ತೂರು ಮೂಲದ ಮಹಿಳೆಯನ್ನು ಪರಿಚಯಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿದ್ದ. 

ಮದುವೆ ಬಗ್ಗೆ ಮಾತನಾಡುವ ನೆಪದಲ್ಲಿ ಜ.14ರಂದು ಆ ಮಹಿಳೆಯ ಪೋಷಕರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ಮನೆಗೆ ಕರೆತರಲು ಚಿಕ್ಕಪ್ಪನನ್ನು ಕಳುಹಿಸುವುದಾಗಿ ಹೇಳಿ ತಾನೇ ಚಿಕ್ಕಪ್ಪನ ಸೋಗಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದು ಮಹಿಳೆಯ ಪೋಷಕರನ್ನು ಭೇಟಿಯಾಗಿದ್ದ.

ಬಳಿಕ ಪರ್ಸ್‌ ಮನೆಯಲ್ಲಿ ಮರೆತು ಬಂದಿರುವುದಾಗಿ ತಿಳಿಸಿ, ಸಂಬಂಧಿಕರಿಗೆ ರೈಲು ಟಿಕೆಟ್‌ ಮುಂಗಡ ಕಾಯ್ದಿರಿಸಬೇಕಿದೆ. ಮನೆಗೆ ಹೋದ ಬಳಿಕ ಹಣ ಕೊಡುವುದಾಗಿ ಹೇಳಿ ಆ ಮಹಿಳೆಯ ಪೋಷಕರಿಂದ ₹10 ಸಾವಿರ ಪಡೆದು ಬಳಿಕ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ಪರಾರಿಯಾಗಿದ್ದ.

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ರೈಲ್ವೆ ಪೊಲೀಸ್‌ ವಿಭಾಗದ ಡಿಐಜಿಪಿ ಎಸ್‌.ಡಿ.ಶರಣಪ್ಪ ತಿಳಿಸಿದ್ದಾರೆ.ವಿಧವೆಯರು, ವಿಚ್ಛೇದಿತ ಮಹಿಳೆಯರೇ ಟಾರ್ಗೆಟ್

ರಾಜಸ್ಥಾನ ಮೂಲದ ಆರೋಪಿ ನರೇಶ್‌ಪುರಿ 20 ವರ್ಷಗಳಿಂದ ಕಾಟನ್‌ಪೇಟೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ವಿವಾಹಿತನಾಗಿದ್ದು, ಪತ್ನಿ ಮತ್ತು ಮಕ್ಕಳು ರಾಜಸ್ಥಾನದಲ್ಲಿ ನೆಲೆಸಿದ್ದಾರೆ. 

ಆರೋಪಿಯು ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ವಿವಿಧ ಹೆಸರುಗಳಲ್ಲಿ ಅವಿವಾಹಿತ ಎಂದು ನಕಲಿ ಪ್ರೊಫೈಲ್‌ ಸೃಷ್ಟಿಸುತ್ತಿದ್ದ. ಸಾಫ್ಟ್‌ವೇರ್‌ ಎಂಜಿನಿಯರ್‌, ಉದ್ಯಮಿ, ಮಾಧ್ಯಮ ಪ್ರತಿನಿಧಿ ಹೀಗೆ ನಾನಾ ರೀತಿಯ ವೃತ್ತಿಗಳನ್ನು ಬರೆದುಕೊಳ್ಳುತ್ತಿದ್ದ. 

ವಿಧವೆಯರು, ವಿಚ್ಛೇದಿತ ಮಹಿಳೆಯರ ಪ್ರೊಫೈಲ್‌ಗಳನ್ನು ಗುರಿಯಾಗಿಸಿ ಮದುವೆಗೆ ಆಸಕ್ತಿ ಇರುವುದಾಗಿ ರಿಕ್ವೆಸ್ಟ್‌ ಕಳುಹಿಸುತ್ತಿದ್ದ. ಆ ಕಡೆಯಿಂದ ಮದುವೆಗೆ ಆಸಕ್ತಿ ವ್ಯಕ್ತವಾದರೆ, ಆ ಮಹಿಳೆಯರ ಮೊಬೈಲ್‌ ಸಂಖ್ಯೆ ಪಡೆದು ಚಾಟಿಂಗ್‌ ನಡೆಸಿ ಮತ್ತಷ್ಟು ಹತ್ತಿರವಾಗುತ್ತಿದ್ದ. ಬಳಿಕ ನಾನಾ ಕಾರಣ ಹೇಳಿ ಹಣ ಪಡೆದು ವಂಚಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ನಕಲಿ ಸಿಮ್‌ ಕಾರ್ಡ್‌ ಬಳಕೆ: ಆರೋಪಿಯು ಐದಾರು ವರ್ಷಗಳ ಹಿಂದೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಸಕ್ರಿಯವಾಗಿರುವ ಎರಡು ಸಿಮ್‌ ಕಾರ್ಡ್‌ಗಳನ್ನು ಹಾಗೂ ಮೊಬೈಲ್‌ ಪೋನ್‌ಗಳನ್ನು ಕಾಳಸಂತೆಯಲ್ಲಿ ಖರೀದಿಸಿದ್ದ.

ಈ ಮೊಬೈಲ್‌ ಸಂಖ್ಯೆಗಳನ್ನು ನೀಡಿ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸುತ್ತಿದ್ದ. ಬಳಿಕ ಪರಿಚಿತವಾಗುವ ಮಹಿಳೆಯರ ಜತೆಗೆ ಆ ಮೊಬೈಲ್‌ ಸಂಖ್ಯೆಗಳಿಂದ ಕರೆ ಮಾಡಿ ತಾಸುಗಟ್ಟಲೇ ಬಣ್ಣಬಣ್ಣದ ಮಾತುಗಳನ್ನಾಡಿ ಮದುವೆ ಆಗುವುದಾಗಿ ನಂಬಿಸುತ್ತಿದ್ದ. 

ಬಳಿಕ ನಾನಾ ನೆಪ ಹೇಳಿ ಹಣ ಪಡೆದು ಆ ಮಹಿಳೆಯರ ಮೊಬೈಲ್‌ ಸಂಖ್ಯೆಗಳನ್ನು ಬ್ಲಾಕ್‌ ಮಾಡುತ್ತಿದ್ದ ಬಗ್ಗೆ ಆರೋಪಿಯು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಕಸ್ಟಮ್ಸ್‌ ಅಧಿಕಾರಿ ಸೋಗಲ್ಲಿ ಪ್ರೊಫೈಲ್‌: ಆರೋಪಿ ನರೇಶ್‌ಪುರಿ ಇತ್ತೀಚೆಗೆ ಪವನ್‌ ಅಗರ್ವಾಲ್‌ ಹೆಸರಿನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿದ್ದ. ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಯಾಗಿದ್ದು, ರಾಜಾಜಿನಗರದಲ್ಲಿ ನೆಲೆಸಿರುವುದಾಗಿ ನಮೂದಿಸಿದ್ದ. 

ಈ ಪ್ರೊಫೈಲ್ ಬಳಸಿಕೊಂಡು ಅಗರ್‌ ಸೇನ್‌ ವೈವಾಕ ಮಂಚ್ ಎಂಬ ವಾಟ್ಸಾಪ್‌ ಗ್ರೂಪ್‌ಗೆ ಸೇರಿದ್ದ. ಈ ಗ್ರೂಪ್‌ನಲ್ಲಿ ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರ ಬಯೋಡೇಟಾ ಪಡೆದಿದ್ದ. 

ಹಿಂದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವಧು-ವರರ ಜಾಹೀರಾತುಗಳನ್ನು ಗಮನಿಸಿ, ಮಹಿಳೆಯರ ಮೊಬೈಲ್‌ಗೆ ಕರೆ ಮಾಡಿ ಮದುವೆಯಾಗುವುದಾಗಿ ನಂಬಿಸುತ್ತಿದ್ದ.

ಒಂದು ವೇಳೆ ಮಹಿಳೆಯರು ಆಸಕ್ತಿ ತೋರಿದರೆ ಅಂದು ರಾತ್ರಿಯಿಂದಲೇ ಅವರಿಗೆ ಕರೆ ಮಾಡಿ ಸಲುಗೆಯಿಂದ ಮಾತನಾಡುತ್ತಿದ್ದ. ಖಾಸಗಿ ಫೋಟೋ ಹಾಗೂ ವಿಡಿಯೋಗಳಿಗೆ ಬೇಡಿಕೆ ಇರಿಸುತ್ತಿದ್ದ. 

ಈತನ ವರ್ತನೆ ಬಗ್ಗೆ ಅನುಮಾನಗೊಂಡ ಕೆಲ ಮಹಿಳೆಯರು ಈತನ ಮೊಬೈಲ್‌ ಸಂಖ್ಯೆಯನ್ನು ಕಪ್ಪು ಪಟ್ಟಿಗೆ ಹಾಕುತ್ತಿದ್ದರು. ಆರೋಪಿಯು ಮಹಿಳೆಯರ ಜತೆಗೆ ರಾತ್ರಿ ವೇಳೆ ಮಾತ್ರ ಕರೆ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.250+ ಮಹಿಳೆಯರೊಂದಿಗೆ ಚಾಟಿಂಗ್‌!

ಆರೋಪಿ ನರೇಶ್‌ ಪುರಿ ಕರ್ನಾಟಕದ 17, ರಾಜಸ್ಥಾನದ 56, ಉತ್ತರಪ್ರದೇಶದ 32, ದೆಹಲಿಯ 32, ಮಧ್ಯಪ್ರದೇಶದ 16, ಮಹಾರಾಷ್ಟ್ರದ 13, ಗುಜರಾತಿನ 11, ತಮಿಳುನಾಡಿನ 6, ಬಿಹಾರ ಮತ್ತು ಜಾರ್ಖಂಡ್‌ನ ತಲಾ 5, ಆಂಧ್ರಪ್ರದೇಶದ ಇಬ್ಬರು ಮಹಿಳೆಯರು ಸೇರಿದಂತೆ 250ಕ್ಕೂ ಅಧಿಕ ಮಹಿಳೆಯರಿಗೆ ಮದುವೆ ಆಗುವುದಾಗಿ ನಂಬಿಸಿ ಮೊಬೈಲ್‌ ಚಾಟಿಂಗ್‌ ಮಾಡಿ ವಂಚಿಸಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು