ರೈಲಿನಲ್ಲಿ ಪೊಲೀಸ್‌ಗೆ ಚಾಕು ಇರಿದ ಆರು ಮಂದಿ ಜೈಲಿಗೆ

KannadaprabhaNewsNetwork | Updated : Feb 29 2024, 10:48 AM IST

ಸಾರಾಂಶ

ಮೈಸೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಗೋಲ್‌ ಗುಂಬಜ್‌ ರೈಲಿನಲ್ಲಿ ಕರ್ತವ್ಯ ನಿರತ ಪೊಲೀಸ್‌ ಪೇದೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಆರು ಮಂದಿ ಆರೋಪಿಗಳನ್ನು ಘಟನೆ ನಡೆದ 24 ತಾಸಿನೊಳಗೆ ಮೈಸೂರು-ಬೆಂಗಳೂರು ರೈಲ್ವೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೈಸೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಗೋಲ್‌ ಗುಂಬಜ್‌ ರೈಲಿನಲ್ಲಿ ಕರ್ತವ್ಯ ನಿರತ ಪೊಲೀಸ್‌ ಪೇದೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಆರು ಮಂದಿ ಆರೋಪಿಗಳನ್ನು ಘಟನೆ ನಡೆದ 24 ತಾಸಿನೊಳಗೆ ಮೈಸೂರು-ಬೆಂಗಳೂರು ರೈಲ್ವೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮೈಸೂರು ರಸ್ತೆಯ ಕಸ್ತೂರಿಬಾ ನಗರ ನಿವಾಸಿಗಳಾದ ಮೊಹಮದ್‌ ಇರ್ಫಾನ್‌(19), ದರ್ಶನ್‌(21), ಮಹಮದ್‌ ಇಮ್ರಾನ್‌(20), ಮೋಹಿನ್‌ ಪಾಷ(21), ಮುನಿರಾಜು ಅಲಿಯಾಸ್‌ ಚಿನ್ನಿ(24) ಹಾಗೂ ಜೆ.ಜೆ.ನಗರದ ಫೈಸಲ್‌ ಖಾನ್‌(22) ಬಂಧಿತರು. 

ಆರೋಪಿಗಳು ಫೆ.26ರಂದು ಗೋಲ್‌ ಗುಂಬಜ್‌ ರೈಲಿನಲ್ಲಿ ಕರ್ತವ್ಯ ನಿರತ ಮೈಸೂರು ರೈಲ್ವೆ ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್‌ ಸತೀಶ್‌ ಚಂದ್ರ ಅವರಿಗೆ ಚಾಕುವಿನಿಂದ ಇರಿದಿದ್ದರು. 

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ಮೈಸೂರು ರೈಲ್ವೆ ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್‌ ಸತೀಶ್‌ ಚಂದ್ರ ಅವರನ್ನು ಫೆ.26ರಂದು ಮೈಸೂರು-ಬೆಂಗಳೂರು ಮಾರ್ಗದಲ್ಲಿ ಚಲಿಸುವ ಗುಲ್‌ ಗುಂಬಜ್‌ ರೈಲಿನಲ್ಲಿ ಕಳ್ಳತನ ಪ್ರಕರಣಗಳ ಪತ್ತೆ ಹಾಗೂ ತಡೆಗಟ್ಟುವ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. 

ಈ ವೇಳೆ ರೈಲಿನ ಎಸ್‌ ಬೋಗಿಯ ಶೌಚಾಲಯದ ಎದುರು ಆರು ಜನರ ಗುಂಪು ಇತ್ತು. ಈ ಪೈಕಿ ಇಬ್ಬರು ರೈಲಿನ ಬೋಗಿಯ ಮೆಟ್ಟಿಲ ಮೇಲೆ ಕುಳಿತು ಸಿಗರೆಟ್‌ ಸೇದುತ್ತಿದ್ದರು. ಉಳಿದ ನಾಲ್ವರು ಶೌಚಾಲಯದ ಬಾಗಿಲ ಬಳಿ ಕುಳಿತು ಅಸಭ್ಯವಾಗಿ ಮಾತನಾಡುತ್ತಿದ್ದರು.

ಕಾನ್‌ಸ್ಟೇಬಲ್‌ಗೆ ಇರಿತ: ಇದರಿಂದ ಶೌಚಾಲಯಕ್ಕೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ವೇಳೆ ಕರ್ತವ್ಯ ನಿರತ ಸತೀಶ್‌ ಚಂದ್ರ ಅವರು ಬುದ್ಧಿವಾದ ಹೇಳಲು ಮುಂದಾಗಿದ್ದಾರೆ. 

ಇದರಿಂದ ರೊಚ್ಚಿಗೆದ್ದ ಆರೋಪಿಗಳು ಏಕಾಏಕಿ ಸತೀಶ್‌ ಚಂದ್ರ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಷ್ಟರಲ್ಲಿ ರೈಲು ಸಂಜೆ 4.40ರ ಸುಮಾರಿಗೆ ಮದ್ದೂರು ರೈಲು ನಿಲ್ದಾಣಕ್ಕೆ ಬಂದಿದೆ. 

ಇವರ ವರ್ತನೆ ಬಗ್ಗೆ ಅನುಮಾನಗೊಂಡು ಆರೋಪಿಗಳನ್ನು ಹಿಡಿಯಲು ಮುಂದಾದಾಗ ಓರ್ವ ಚಾಕು ತೆಗೆದು ಸತೀಶ್‌ ಚಂದ್ರ ಅವರ ಬೆನ್ನಿಗೆ ಚುಚ್ಚಿದ್ದಾನೆ. 

ಈ ವೇಳೆ ಗಾಯಗೊಂಡು ರಕ್ತ ಸೋರುತ್ತಿದ್ದರೂ ಸತೀಶ್‌ ಚಂದ್ರ ಅವರು ಸಿನಿಮೀಯ ಶೈಲಿಯಲ್ಲಿ ಪ್ರಯಾಣಿಕರ ಸಹಾಯದಿಂದ ಇಬ್ಬರು ಆರೋಪಿಗಳನ್ನು ಹಿಡಿದಿದ್ದಾರೆ. ಉಳಿದ ನಾಲ್ವರು ಆರೋಪಿಗಳು ರೈಲಿನಿಂದ ಜಿಗಿದು ಪರಾರಿಯಾಗಿದ್ದರು.

ಬಳಿಕ ಸತೀಶ್‌ ಚಂದ್ರ ಅವರು ಮದ್ದೂರು ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರಿತ ಸ್ಟೇಷನ್‌ ಮ್ಯಾನೇಜರ್‌ ಕಚೇರಿಗೆ ಬಂದು ವಿಷಯ ತಿಳಿಸಿದ್ದಾರೆ.

ಅಂತೆಯೇ ಮೈಸೂರು ರೈಲ್ವೆ ಪೊಲೀಸ್‌ ಠಾಣೆಯ ಅಧಿಕಾರಿಗಳಿಗೆ ನಡೆದ ಘಟನೆ ವಿವರಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಮದ್ದೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಆರೋಪಿಗಳ ವಿರುದ್ಧ ಮೈಸೂರು ರೈಲ್ವೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

24 ತಾಸಿನೊಳಗೆ ನಾಲ್ವರ ಬಂಧನ: ಈ ದೂರಿನ ಮೇರೆಗೆ ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಪರಾರಿಯಾಗಿದ್ದ ನಾಲ್ವರು ಆರೋಪಿಗಳ ಬಂಧನಕ್ಕೆ ಮೈಸೂರು-ಬೆಂಗಳೂರು ರೈಲ್ವೆ ಪೊಲೀಸರ ಒಂದು ವಿಶೇಷ ತಂಡ ರಚಿಸಿದ್ದರು. 

ಈ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ 24 ತಾಸಿನೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ಸದ್ಯ ಬಂಧಿತ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮಾ.11ರ ವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ರೈಲ್ವೆ ಪೊಲೀಸರ ಈ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Share this article