ಕೊಲೆ ಕೇಸಲ್ಲಿ ಬಿಜೆಪಿಯ ಬೈರತಿಗೆ ಬಂಧನ ಭೀತಿ

KannadaprabhaNewsNetwork |  
Published : Sep 25, 2025, 01:00 AM ISTUpdated : Sep 25, 2025, 05:38 AM IST
MLA Byrathi Basavaraj and Jagadish

ಸಾರಾಂಶ

  ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜು ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಅವರನ್ನು ಬಂಧಿಸದಂತೆ ರಕ್ಷಣೆ ನೀಡಿ ಹೊರಡಿಸಿರುವ ಮಧ್ಯಂತರ ಆದೇಶ ತೆರವುಗೊಳಿಸಬೇಕು ಎಂದು ಕೋರಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

 ಬೆಂಗಳೂರು :  ರೌಡಿ ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜು ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಅವರನ್ನು ಬಂಧಿಸದಂತೆ ರಕ್ಷಣೆ ನೀಡಿ ಹೊರಡಿಸಿರುವ ಮಧ್ಯಂತರ ಆದೇಶ ತೆರವುಗೊಳಿಸಬೇಕು ಎಂದು ಕೋರಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಈ ಕುರಿತು ಸಿಐಡಿ ಪೊಲೀಸರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರ ಪೀಠ, ಎಷ್ಟು ದಿನಗಳ ಕಾಲ ಬೈರತಿ ಬಸವರಾಜು ಅವರು ಪೊಲೀಸರ ವಶಕ್ಕೆ ಬೇಕಿದೆ ಎಂಬುದನ್ನು ತಿಳಿಸುವಂತೆ ಸಿಐಡಿ ಪೊಲೀಸರ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರಿಗೆ ಸೂಚಿಸಿತು.

ಅಲ್ಲದೆ, ಸಿಐಡಿ ಪೊಲೀಸರ ಅರ್ಜಿಗೆ ಅ.8ರೊಳಗೆ ಆಕ್ಷೇಪಣೆ ಸಲ್ಲಿಸಲು ಬೈರತಿ ಬಸವರಾಜು ಪರ ವಕೀಲರಿಗೆ ಸೂಚಿಸಿದ ಪೀಠ, ರಾಜಕೀಯ ದೃಷ್ಟಿಯಿಂದ ಕಿರುಕುಳ ನೀಡಬಾರದು ಎಂದು ಮೌಖಿಕವಾಗಿ ನುಡಿದು ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಸಿಐಡಿ ಪೊಲೀಸರ ಪರ ಎಸ್‌ಪಿಪಿ ಬಿ.ಎನ್‌.ಜಗದೀಶ್‌, ಈ ಪ್ರಕರಣದಲ್ಲಿ ಹಲವರ ಸಾಕ್ಷ್ಯ ಸಂಗ್ರಹಿಸಲಾಗಿದೆ. ಹಿಂದಿನ ವಿಚಾರಣೆಗಳ ವೇಳೆ ಬೈರತಿ ಬಸವರಾಜು ಸುಳ್ಳು ಮಾಹಿತಿ ನೀಡಿದ್ದಾರೆ. ಹಾಗಾಗಿ ಇದೀಗ ಬೈರತಿ ಬಸವರಾಜು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಿದೆ. ಆದ್ದರಿಂದ ಬಂಧಿಸದಂತೆ ಪೊಲೀಸರಿಗೆ ಸೂಚಿಸಿ ಈ ಹಿಂದೆ ಹೊರಡಿಸಿರುವ ಮಧ್ಯಂತರ ಆದೇಶ ತೆರವುಗೊಳಿಸಬೇಕು ಎಂದು ಕೋರಿದರು.

ಈ ಮನವಿಗೆ ಆಕ್ಷೇಪಿಸಿದ ಬೈರತಿ ಬಸವರಾಜು ಪರ ವಕೀಲರು, ಹಿಂದೆ ಪೊಲೀಸರು ಕರೆದಾಗಲೆಲ್ಲಾ ಅರ್ಜಿದಾರರು ವಿಚಾರಣೆಗೆ ಹಾಜರಾಗಿ ಅಗತ್ಯ ಸಹಕಾರ ನೀಡಿದ್ದಾರೆ. ಪೊಲೀಸರು ಕಳೆದ ಒಂದು ತಿಂಗಳಿನಿಂದ ವಿಚಾರಣೆಗೆ ಕರೆದಿಲ್ಲ. ಈಗ ಏಕಾಏಕಿ ಬಂಧನದ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ. ಅದರ ಅಗತ್ಯತೆ ಏಕೆಂದು ಹೇಳುತ್ತಿಲ್ಲ. ಹಾಗಾಗಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸ್ವಲ್ಪ ಸಮಯಾವಕಾಶ ನೀಡಬೇಕು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ:

ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ರೌಡಿಶೀಟರ್‌ ಬಿಕ್ಲುಶಿವ ಅಲಿಯಾಸ್‌ ಶಿವಪ್ರಕಾಶ್‌ ಕೊಲೆಯಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್‌ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಜಗದೀಶ್‌, ಕಿರಣ್‌, ವಿಮಲ್‌, ಅನಿಲ್‌ ಮತ್ತು ಬೈರತಿ ಬಸವರಾಜ್‌ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬಂಧನ ಭೀತಿ ಎದುರಿಸುತ್ತಿದ್ದ ಬೈರತಿ ಬಸವರಾಜು ಹೈಕೋರ್ಟ್‌ ಮೊರೆ ಹೋಗಿದ್ದರು. ನಂತರ ನ್ಯಾಯಾಲಯದ ಸೂಚನೆ ಮೇರೆಗೆ ಬೈರತಿ, ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆ ಹಾಜರಾಗಿದ್ದರು. ಅವರನ್ನು ಬಂಧಿಸದಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಅದನ್ನು ತೆರವುಗೊಳಿಸುವಂತೆ ಸಿಐಡಿ ಪೊಲೀಸರು ಈಗ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

PREV
Read more Articles on

Recommended Stories

ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ
ಮೊದಲ ರಾತ್ರಿ ಲೈಂಗಿಕ ಕ್ರಿಯೆ ನಡೆಸದ ಕಾರಣಕ್ಕೆ ₹2 ಕೋಟಿ ಜೀವನಾಂಶಕ್ಕೆ ಬೇಡಿಕೆ!