ಬೆಂಗಳೂರು : ರಾಜಧಾನಿಯಲ್ಲಿ ಖಾಸಗಿ ಕಂಪನಿ, ಆಸ್ಪತ್ರೆಗಳು, ಖಾಸಗಿ ಶಾಲೆಗಳ ಬಳಿಕ ಇದೀಗ ಕಿಡಿಗೇಡಿಗಳು ನಗರದ ಎರಡು ಪ್ರತಿಷ್ಠಿತ ಹೋಟೆಲ್‌ಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ.
ರೇಸ್‌ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಟ್ ಹೋಟೆಲ್ ಮತ್ತು ಎಲೆಕ್ಟ್ರಾನಿಕ್ ಸಿಟಿಯ ದಿ ಒಟೇರಾ ಹೋಟೆಲ್‌ಗೆ ಐಪಿಎಸ್ ಅಧಿಕಾರಿ ಕೆ.ರಾಧಾಕೃಷ್ಣನ್ ಹೆಸರಿನ ಇ-ಮೇಲ್‌ನಿಂದ ಏಕಕಾಲಕ್ಕೆ ಶನಿವಾರ ಮುಂಜಾನೆ 5.36ಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
‘ಹೋಟೆಲ್ ಆವರಣದೊಳಗೆ ಹೈ ಗ್ಯಾಸ್ ಪ್ರಷರ್ ಚೇಂಬರ್ಸ್ ಅಳವಡಿಸಿದ್ದು, ಸ್ಫೋಟಗೊಳ್ಳಲಿದೆ’ ಎಂದು ಆ ಇ-ಮೇಲ್ ಸಂದೇಶದಲ್ಲಿ ತಿಳಿಸಲಾಗಿತ್ತು. ಇ-ಮೇಲ್ ಗಮನಿಸಿರುವ ಎರಡೂ ಹೋಟೆಲ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನದಳ ಸ್ಥಳಕ್ಕೆ ಕರೆಸಿಕೊಂಡು ಹೋಟೆಲ್‌ನ ಅಡುಗೆ ಮನೆ. ಅತಿಥಿಗಳ ಕೋಣೆಗಳು, ಹೊರ ಆವರಣ, ಪಾರ್ಕಿಂಗ್ ಸೇರಿದಂತೆ ಇಡೀ ಹೋಟೆಲ್ ಒಳ ಹಾಗೂ ಹೊರ ಆವರಣವನ್ನು ಕೂಲಂಕಷವಾಗಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಯಾವುದೇ ಸ್ಫೋಟಕ ವಸ್ತು, ಬಾಂಬ್ ಸೇರಿದಂತೆ ಯಾವುದೇ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ಖಚಿತವಾಗಿದೆ.
ಒಟೆರಾ ಹೋಟೆಲ್‌ಗೆ 2ನೇ ಬಾರಿ ಬೆದರಿಕೆ: ದಿ ಒಟೆರಾ ಹೋಟೆಲ್‌ಗೆ ಆರು ತಿಂಗಳ ಹಿಂದೆ ಕಿಡಿಗೇಡಿಗಳು ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದರು. ಇದೀಗ ಎರಡನೇ ಬಾರಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಹುಸಿ ಬಾಂಬ್ ಬೆದರಿಕೆ ಸಂದೇಶದ ಸಂಬಂಧ ಹೈಗ್ರೌಂಡ್ಸ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.-ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಪೊಲೀಸ್ ಶ್ವಾನದಳದಿಂದ ತಪಾಸಣೆ.