ಖಾಸಗಿ ಕ್ಷಣದ ವಿಡಿಯೋ, ಫೋಟೋಗಳಿರುವ ಅನುಮಾನ : ಮಾಜಿ ಪ್ರೇಮಿಯ ಮೊಬೈಲ್‌ ಸುಲಿಗೆಗೆ ಟೆಕಿ ಸುಪಾರಿ!

KannadaprabhaNewsNetwork |  
Published : Sep 29, 2024, 01:37 AM ISTUpdated : Sep 29, 2024, 04:35 AM IST
mobile top up

ಸಾರಾಂಶ

ಮೊಬೈಲ್‌ನಲ್ಲಿ ಖಾಸಗಿ ವಿಡಿಯೋಗಳು ಹಾಗೂ ಫೋಟೋಗಳು ಇರುವ ಬಗ್ಗೆ ಅನುಮಾನಗೊಂಡ ಯುವತಿ, ಮಾಜಿ ಪ್ರಿಯಕರನಿಂದ ಮೊಬೈಲ್‌ ಕಿತ್ತುಕೊಳ್ಳಲು ಸುಪಾರಿ ನೀಡಿದ್ದಳು. ಈ ಸಂಚಿನಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಮೊಬೈಲ್‌ನಲ್ಲಿ ಖಾಸಗಿ ಕ್ಷಣದ ವಿಡಿಯೋಗಳು ಹಾಗೂ ಫೋಟೋಗಳಿರುವ ಬಗ್ಗೆ ಅನುಮಾನಗೊಂಡು ಸಿನಿಮೀಯ ಶೈಲಿಯಲ್ಲಿ ಸುಪಾರಿ ನೀಡಿ ಮಾಜಿ ಪ್ರಿಯಕರನ ಮೊಬೈಲ್‌ ಸುಲಿಗೆ ಮಾಡಿಸಿದ್ದ ಯುವತಿ ಸೇರಿ ಐವರು ಆರೋಪಿಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಡತಿ ನಿವಾಸಿ ಪಿ.ಶ್ರುತಿ (29) ಸೇರಿದಂತೆ ಸುಪಾರಿ ಪಡೆದುಕೊಂಡಿದ್ದ ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿಗಳಾದ ಮನೋಜ್‌ ಕುಮಾರ್‌ (25), ಸುರೇಶ್‌ ಕುಮಾರ್‌ (26), ಹೊನ್ನಪ್ಪ (25) ಹಾಗೂ ವೆಂಕಟೇಶ್‌ (27) ಬಂಧಿತರು. ಸಿಂಗಸಂದ್ರದ ಎಇಸಿಎಸ್‌ ಲೇಔಟ್‌ ನಿವಾಸಿ ದೂಂಪಾ ವಂಶಿಕೃಷ್ಣ ರೆಡ್ಡಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣದ ವಿವರ: ದೂರುದಾರ ಒಡಿಶಾ ಮೂಲದ ವಂಶಿಕೃಷ್ಣ ರೆಡ್ಡಿ ಮತ್ತು ತಮಿಳುನಾಡು ಮೂಲದ ಆರೋಪಿ ಶ್ರುತಿ ನಗರದ ಖಾಸಗಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಕುಟುಂಬದವರ ಅನುಮತಿ ಪಡೆದು ಮದುವೆಯಾಗಲು ನಿರ್ಧರಿಸಿದ್ದರು. ಈ ನಡುವೆ ಶ್ರುತಿ ತನಗೆ ಕೆಲ ವರ್ಷಗಳ ಹಿಂದೆ ಬೇರೊಬ್ಬ ಯುವಕನ ಜತೆಗೆ ಸಂಬಂಧ ಇದ್ದ ವಿಚಾರವನ್ನು ಹೇಳಿಕೊಂಡಿದ್ದಳು. ಇದರಿಂದ ಅಸಮಾಧಾನಗೊಂಡ ವಂಶಿಕೃಷ್ಣ, ಶ್ರುತಿಯನ್ನು ಮದುವೆಯಾಗಲು ನಿರಾಕರಿಸಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ ಕೆಲ ತಿಂಗಳಿಂದ ದೂರವಾಗಿದ್ದರು.

ಮೊಬೈಲ್‌ ಸುಲಿಗೆಗೆ ಸುಪಾರಿ: ಆದರೆ, ವಂಶಿಕೃಷ್ಣ ಮೊಬೈಲ್‌ನಲ್ಲಿ ತನ್ನ ಖಾಸಗಿ ವಿಡಿಯೋಗಳು ಹಾಗೂ ಫೋಟೋಗಳು ಇರುವ ಬಗ್ಗೆ ಅನುಮಾನಗೊಂಡಿದ್ದ ಶ್ರುತಿ, ಮುಂದೆ ತೊಂದರೆಯಾಗಲಿದೆ ಎಂದು ಭಾವಿಸಿದ್ದಳು. ಹೇಗಾದರೂ ಮಾಡಿ ಆತನ ಮೊಬೈಲ್‌ ಪಡೆದು ಪರಿಶೀಲಿಸಲು ಆಲೋಚಿಸಿದ್ದಳು. ಅದಕ್ಕಾಗಿ ತನಗೆ ಪರಿಚಯವಿದ್ದ ಮನೋಜ್‌ ಕುಮಾರ್‌ನನ್ನು ಸಂಪರ್ಕಿಸಿ, ವಂಶಿಕೃಷ್ಣನ ಮೊಬೈಲ್‌ ಸುಲಿಗೆ ಮಾಡಲು ₹1.15 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಅದರಂತೆ ಮನೋಜ್‌ ಹಾಗೂ ಆತನ ಮೂವರು ಸ್ನೇಹಿತರು ಗ್ಯಾಂಗ್‌ ಕಟ್ಟಿಕೊಂಡು ಮೊಬೈಲ್‌ ಸುಲಿಗೆಗೆ ಯೋಜನೆ ರೂಪಿಸಿದ್ದರು.

ಇಬ್ಬರ ಮೊಬೈಲ್‌ ಸುಲಿಗೆ: ಆರೋಪಿ ಶ್ರುತಿ, ಸೆ.20ರಂದು ವಂಶಿಕೃಷ್ಣನ ಸಂಪರ್ಕಿಸಿ ಮಾತನಾಡಲು ಭೋಗನಹಳ್ಳಿಯ ಗುರು ಸ್ಪೋರ್ಟ್ಸ್‌ ಸಮೀಪದ ಪಾರ್ಕಿಂಗ್‌ ಸ್ಥಳಕ್ಕೆ ಕರೆದಿದ್ದಳು. ಸಂಜೆ ವಂಶಿಕೃಷ್ಣ ಮತ್ತು ಶ್ರುತಿ ಭೇಟಿಯಾಗಿದ್ದಾರೆ. ಬಳಿಕ ರಾತ್ರಿ 8.15ಕ್ಕೆ ಮನೆಗೆ ತೆರಳಲು ಇಬ್ಬರು ದ್ವಿಚಕ್ರ ವಾಹನ ಏರಿ ಹೊರಟ್ಟಿದ್ದಾರೆ. ಗುರು ಸ್ಪೋರ್ಟ್ಸ್‌ ಸಮೀಪದ ವೈ ಜಂಕ್ಷನ್‌ನಲ್ಲಿ ಹೋಗುವಾಗ, ಹಿಂದಿನಿಂದ ಬಂದ ಬಿಳಿ ಬಣ್ಣದ ಕಾರೊಂದು ಏಕಾಏಕಿ ಬೈಕ್‌ಗೆ ಡಿಕ್ಕಿಯಾಗಿದೆ. ಬಳಿಕ ಇಬ್ಬರು ಅಪರಿಚಿತರು ಕಾರಿನಿಂದ ಕೆಳಗೆ ಇಳಿದು ವಂಶಿಕೃಷ್ಣನ ಮೇಲೆ ಹಲ್ಲೆ ಮಾಡಿ, ಮೊಬೈಲ್‌ ಕಿತ್ತುಕೊಂಡಿದ್ದಾರೆ. ಅಂತೆಯೇ ಶ್ರುತಿಯ ಮೊಬೈಲ್‌ ಸಹ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಘಟನೆ ಬಳಿಕ ಶ್ರುತಿ, ಬೆಂಗಳೂರಿನಲ್ಲಿ ಈ ರೀತಿ ಘಟನೆಗಳು ಸಾಮಾನ್ಯ, ಪೊಲೀಸರಿಗೆ ದೂರು ನೀಡುವುದು ಬೇಡ ಎಂದು ಮಾಜಿ ಪ್ರಿಯಕರ ವಂಶಿಕೃಷ್ಣಗೆ ಹೇಳಿದ್ದಾಳೆ. ಆದರೂ ವಂಶಿಕೃಷ್ಣ ಬೆಳ್ಳಂದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ.

ಸಿಸಿಟಿವಿ ಸುಳಿವು ಆಧರಿಸಿ ಬಂಧನ: ತನಿಖೆಗೆ ಇಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ಸಿಕ್ಕಿ ಸುಳಿವಿನ ಮೇರೆಗೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಸುಪಾರಿ ವಿಚಾರ ಬೆಳಕಿಗೆ ಬಂದಿದೆ. ಶ್ರುತಿ ಸೂಚನೆ ಮೇರೆಗೆ ವಂಶಿಕೃಷ್ಣ ಮೊಬೈಲ್‌ ಸುಲಿಗೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಬಳಿಕ ಶ್ರುತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಸುಲಿಗೆ ಹಿಂದಿನ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್‌ ಕೆರೆಗೆ ಎಸೆದರು:  ಆರೋಪಿಗಳು ವಂಶಿಕೃಷ್ಣನ ಮೊಬೈಲ್‌ ಸುಲಿಗೆ ಬಳಿಕ ಮೊಬೈಲ್ ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ, ಪಾಸ್‌ವರ್ಡ್‌ ಹೊಂದಿಕೆ ಆಗಿಲ್ಲ. ಹೀಗಾಗಿ ಸಿಂಗಸಂದ್ರ ಕೆರೆಯಲ್ಲಿ ವಂಶಿಕೃಷ್ಣನ ಮೊಬೈಲ್‌ ಎಸೆದು ಪರಾರಿಯಾಗಿದ್ದರು. ಸದ್ಯ ಶ್ರುತಿ ಸೇರಿ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು