ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳ ಸೇರಿ ಮೂವರ ಬಂಧನ

KannadaprabhaNewsNetwork |  
Published : Aug 24, 2024, 01:30 AM ISTUpdated : Aug 24, 2024, 05:23 AM IST
Prisoner in Jail

ಸಾರಾಂಶ

ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳ ಸೇರಿ ಮೂವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು  :  ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳ ಸೇರಿ ಮೂವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಡುಗೋಡಿ ರಾಜೇಂದ್ರನಗರ ನಿವಾಸಿ ಅಪ್ಪು ಅಲಿಯಾಸ್‌ ಕೊಳಾಯಿ(32), ತಮಿಳುನಾಡಿನ ಧರ್ಮಪುರಿ ಮೂಲದ ಪೆರ್ರಿಸ್ವಾಮಿ ಹಾಗೂ ತಾಂಬರಸಿ ಸೆಲ್ವನ್‌ ಬಂಧಿತರು. ಆರೋಪಿಗಳಿಂದ 50 ಲಕ್ಷ ರು. ಮೌಲ್ಯದ 674 ಗ್ರಾಂ ಚಿನ್ನಾಭರಣ, 240 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ವಿದೇಶಿ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ದುಷ್ಕರ್ಮಿಗಳು ಕೋಡಿಚಿಕ್ಕನಹಳ್ಳಿಯ ಒಂಟಿ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್ಸ್‌ಪೆಕ್ಟರ್‌ ಎ.ಡಿ.ಪ್ರೀತಮ್‌ ನೇತೃತ್ವದಲ್ಲಿ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಸಿಸಿಟಿವಿ, ಬೆರಳಚ್ಚು ಆಧರಿಸಿ ಬಂಧನ:  ಪ್ರಕರಣದ ತನಿಖೆ ವೇಳೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ, ಘಟನಾ ಸ್ಥಳದ ಬೆರಳಚ್ಚಿನ ಸುಳಿವಿನ ಮೇರೆಗೆ ಆಡುಗೋಡಿಯ ರಾಜೇಂದ್ರನಗರದ ಮುಖ್ಯರಸ್ತೆಯಲ್ಲಿ ಆರೋಪಿ ಅಪ್ಪುನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಕಳ್ಳತನ ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಮಂದುವರೆದ ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ 60 ಗ್ರಾಂ ಚಿನ್ನಾಭರಣ ಹಾಗೂ ಆತನ ಮನೆಯ ಪಕ್ಕದಲ್ಲಿ ಪೆಟ್ಟಿಯಲ್ಲಿ ಬಚ್ಚಿಟ್ಟಿದ್ದ ಮತ್ತಷ್ಟು ಚಿನ್ನಾಭರಣ, ಬೆಳ್ಳಿವಸ್ತುಗಳು, ವಿದೇಶಿ ನೋಟುಗಳನ್ನು ಜಪ್ತಿ ಮಾಡಲಾಗಿದೆ.

ಹೆಚ್ಚಿನ ವಿಚಾರಣೆ ವೇಳೆ ಆರೋಪಿ ಅಪ್ಪು ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನ ಧರ್ಮಪುರಿಯಲ್ಲಿರುವ ಈತನ ಚಿಕ್ಕಪ್ಪ ಪೆರ್ರಿಸ್ವಾಮಿ ಹಾಗೂ ಸ್ನೇಹಿತ ತಾಂಬರಸಿ ಸೆಲ್ವನ್‌ನಿಂದ 34 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕಳವು ಮಾಲು ಸ್ವೀಕಾರದ ಆರೋಪದಡಿ ಈ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬಾಕ್ಸ್‌-ಜೈಲಿನಿಂದ ಬಂದ 13 ದಿನಕ್ಕೆ ಕಳ್ಳತನ!

ಆರೋಪಿ ಅಪ್ಪು ವೃತ್ತಿಪರ ಕಳ್ಳನಾಗಿದ್ದು, ಕಳೆದ 10 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಈತನ ವಿರುದ್ಧ ಈ ಹಿಂದೆ ಬೊಮ್ಮನಹಳ್ಳಿ, ಆಡುಗೋಡಿ ಸೇರಿ ನಗರದ ವಿವಿಧ ಠಾಣೆಗಳಲ್ಲಿ ಮನೆಗಳವು ಹಾಗೂ ಹಲವು ಪ್ರಕರಣಗಳು ದಾಖಲಾಗಿವೆ. ಪ್ರಕರಣವೊಂದರ ವಾರೆಂಟ್ ಸಂಬಂಧ ಆಡುಗೋಡಿ ಠಾಣೆ ಪೊಲೀಸರು 7 ತಿಂಗಳ ಹಿಂದೆಯಷ್ಟೇ ಆರೋಪಿ ಅಪ್ಪುನನ್ನು ಬಂಧಿಸಿ ಜೈಲಿಗಟ್ಟಿದ್ದರು. ಆ.3ರಂದು ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ ಆರೋಪಿಯು ಆ.16ರಂದು ಕೋಡಿಚಿಕ್ಕನಹಳ್ಳಿಯ ಒಂಟಿ ಮನೆಯ ಬೀಗ ಮುರಿದು ಕಳವು ಮಾಡಿ ಇದೀಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!