ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಲ ವಾಪಸ್ ಕೇಳಿದ್ದಕ್ಕೆ ಕೋಪಗೊಂಡು ತನ್ನ ಮಾಂಸದ ಅಂಗಡಿ ಮಾಲೀಕನ ಮೇಲೆ ಕೆಲಸಗಾರ ಹಲ್ಲೆ ನಡೆಸಿ ಮಾಂಸ ಕತ್ತರಿಸುವ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶಿವಾಜನಗರದ ನಿವಾಸಿ ಅಲಿ ಅಫ್ಸರ್ (45) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಅಂಗಡಿ ಕೆಲಸಗಾರ ತಿಲಕನಗರದ ಅಕ್ಬರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹಣದ ವಿಚಾರವಾಗಿ ಅಂಗಡಿಯಲ್ಲಿ ಸೋಮವಾರ ರಾತ್ರಿ ಮಾಲಿಕ ಹಾಗೂ ಕೆಲಸಗಾರ ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3.20 ಲಕ್ಷ ರು. ಸಾಲದ ವಿಚಾರಕೆಲ ವರ್ಷಗಳಿಂದ ಬೇಗೂರು ಸಮೀಪ ಮಾಂಸದ ಅಂಗಡಿ ನಡೆಸುತ್ತಿದ್ದ ಅಲಿ ಅಫ್ಸರ್, ಶಿವಾಜಿನಗರದಲ್ಲಿ ತನ್ನ ಕುಟುಂಬದ ಜತೆ ಅವರು ನೆಲೆಸಿದ್ದರು. ಈ ಮೊದಲು ಅಫ್ಸರ್ ರವರ ಸೋದರನ ಅಂಗಡಿಯಲ್ಲಿ ಅಕ್ಬರ್ ಕೆಲಸ ಮಾಡುತ್ತಿದ್ದ. ಆದರೆ ಹಣದ ವಿಚಾರವಾಗಿಯೇ ಸೋದರನ ಬಳಿ ಕಿತ್ತಾಡಿಕೊಂಡು ಕೆಲಸ ಬಿಟ್ಟಿದ್ದ ಅಕ್ಬರ್‌ಗೆ ಅಫ್ಸರ್ ಕರೆದು ಕೆಲಸ ಕೊಟ್ಟಿದ್ದರು. ಹೀಗಿದ್ದರೂ ಆತನ ವರ್ತನೆ ಬದಲಾಗಿರಲಿಲ್ಲ.
ಅಫ್ಸರ್ ಬಳಿ ಕೂಡ 3.20 ಲಕ್ಷ ರು ಹಣವನ್ನು ಆತ ಸಾಲ ಪಡೆದಿದ್ದ. ಈ ಸಾಲ ಮರಳಿಸುವಂತೆ ಕೇಳಿದಾಗ ಏನಾದರೂ ಕಾರಣವನ್ನು ಆರೋಪಿ ಕೊಡುತ್ತಿದ್ದ. ಇದೇ ವಿಚಾರವಾಗಿ ಪರಸ್ಪರ ಜಗಳವಾಗುತ್ತಿತ್ತು. ಅಂತೆಯೇ ಸೋಮವಾರ ಕೂಡ ಹಣದ ವಿಚಾರವಾಗಿ ಅಂಗಡಿಯಲ್ಲಿ ಅಫ್ಸರ್ ಹಾಗೂ ಅಕ್ಬರ್ ಮಧ್ಯೆ ಗಲಾಟೆ ಶುರುವಾಗಿದೆ. ನನ್ನ ಸ್ನೇಹಿತನಿಗೆ ತುರ್ತಾಗಿ 20 ಸಾವಿರ ರು ಕೊಡಬೇಕಿದೆ. ಹೀಗಾಗಿ ನೀನು 3.20 ಲಕ್ಷ ರು ಬದಲು ತಕ್ಷಣವೇ 20 ಸಾವಿರ ರು. ಕೊಡುವಂತೆ ಅಕ್ಬರ್‌ಗೆ ಅಫ್ಸರ್ ಒತ್ತಾಯಿಸಿದ್ದಾನೆ. ಆದರೆ ಸಾಲ ಮರಳಿಸಲು ಆತ ನಿರಾಕರಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ಮಾಂಸ ಕತ್ತರಿಸುವ ಮಚ್ಚಿನಿಂದ ಅಫ್ಸರ್ ಮೇಲೆ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.