ಕನ್ನಡಪ್ರಭ ವಾರ್ತೆ ಪಾಂಡವಪುರ
ಮನೆ ಮುಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಲಕ್ಷಾಂತರ ರು. ಬೆಲೆಬಾಳುವ ಟಗರು, ಮೇಕೆಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ಬೋರೆಮೇಗಲಕೊಪ್ಪಲು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.ಗ್ರಾಮದ ನರಸಿಂಹೇಗೌಡರ ಪುತ್ರ ಧರ್ಮರಾಜು ಅವರಿಗೆ ಸೇರಿದ 9 ಟಗರು, ವಾತ ಹಾಗೂ ಮೇಕೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕದ್ದ ಟಗರು, ವಾತ ಹಾಗೂ ಮೇಕೆಗಳು ಅಂದಾಜು 2 ಲಕ್ಷಕ್ಕೂ ಅಧಿಕ ಬೆಲೆಬಾಳುತ್ತಿದ್ದವು ಎಂದು ಅಂದಾಜಿಸಲಾಗಿದೆ.
ಮಾಲೀಕ ಧರ್ಮರಾಜು ಅವರು ಎಂದಿನಂತೆ ತಮ್ಮ ಮನೆ ಮುಂಭಾಗ ಕುರಿ, ಮೇಕೆ ಕಟ್ಟಲು ನಿರ್ಮಿಸಿಕೊಂಡಿದ್ದ ಕೊಟ್ಟಿಗೆಯಲ್ಲಿ ಸೋಮವಾರ ಟಗರು, ಮೇಕೆಗಳನ್ನು ಕಟ್ಟಿಹಾಕಿ ಮಲಗಿದ್ದಾರೆ. ವಾಹನದಲ್ಲಿ ಬಂದಿರುವ ಕದೀಮರು ಧರ್ಮರಾಜು ಮಲಗಿದ್ದ ಮನೆಯ ಬಾಗಿಲಿಗೆ ಯಾರು ಹೊರಗೆ ಬಾರದಂತೆ ಚಿಲಕಕ್ಕೆ ಕಡ್ಡಿಹಾಕಿ ರಾತ್ರಿ ಸುಮಾರು 1 ರಿಂದ 1.30 ಗಂಟೆ ಸಮಯದಲ್ಲಿ ಕೊಟ್ಟಿಗೆಯಲ್ಲಿದ್ದ ಕಟ್ಟಿದೆ 9 ಟಗರು, ಮೇಕೆ, ವಾತವನ್ನು ಕದ್ದು ಎರಡು ಕುರಿ ಮರಿಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.ಮೇಕೆಗಳು ಕಿರುಚಾಡುವ ಶಬ್ಧಕೇಳಿ ಮನೆಯವರು ಹೊರಗಡೆ ಬರಲು ಎಷ್ಟೇ ಪ್ರಯತ್ನಿಸಿದರು. ಹೊರಗಿನಿಂದ ಚಿಲಕ ಹಾಕಿದ್ದರಿಂದ ಬರಲು ಸಾಧ್ಯವಾಗಿಲ್ಲ. ಬಳಿಕ ಕಿರುಚಾಟ ನಡೆಸಿದಾಗ ಅಕ್ಕಪಕ್ಕದ ಮನೆಯವರು ಬರುವಷ್ಟರಲ್ಲಿ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕುರಿಗಳ ಮಾಲೀಕ ಧರ್ಮರಾಜು ಅವರು ನೀಡಿರುವ ದೂರಿನ ಮೇರೆಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೈಲಿನಿಂದ ಬಿದ್ದು ಅಪರಿಚಿತ ಪ್ರಯಾಣಿಕ ಸಾವು
ಮದ್ದೂರು:ಚಲಿಸುತ್ತಿದ್ದ ರೈಲಿನಿಂದ ಬಿದ್ದು ಅಪರಿಚಿತ ಪ್ರಯಾಣಿಕ ಮೃತಪಟ್ಟಿರುವ ಘಟನೆ ಪಟ್ಟಣದ ಜೋಡಿ ರೈಲು ಮಾರ್ಗದ ಕೊಲ್ಲಿನದಿ ಸೇತುವೆ ಬಳಿ ಜರುಗಿದೆ. ಸುಮಾರು 45 ರಿಂದ 50 ವರ್ಷದ ವ್ಯಕ್ತಿ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ರೈಲಿನಿಂದ ಆಯತಪ್ಪಿ ಬಿದ್ದು ಅಸುನೀಗಿದ್ದಾನೆ. ರೈಲಿನಿಂದ ಬಿದ್ದ ರಭಸಕ್ಕೆ ಈತನ ಬಲತೋಳು, ಬಲತೊಡೆ ಮುರಿದು ಗಾಯಗೊಂಡಿದ್ದಾನೆ. ಕಳೆದ ನಾಲ್ಕೈದು ದಿನಗಳ ಹಿಂದೆ ಶವ ನೀರನಲ್ಲಿ ಬಿದ್ದ ಕಾರಣ ಕೊಳೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನ ಮೈಮೇಲೆ ಕಪ್ಪು ಪ್ಯಾಂಟ್, ಕಪ್ಪು ಜಕೀನ್, ನೀಲಿಚೆಡ್ಡಿ, ಬಿಳಿ ಬಣ್ಣದ ತುಂಬುತೊಳಿನ ಷರ್ಟ್ ಧರಿಸಿದ್ದು ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.