ಕೆ.ಎಂ.ದೊಡ್ಡಿ : ಬುಲೆಟ್ ಬೈಕ್ ಡಿಕ್ಕಿಯಾಗಿ ರಸ್ತೆ ದಾಟಲು ನಿಂತಿದ್ದ ಬೈಕ್ ಸವಾರ ಸಾವು

KannadaprabhaNewsNetwork | Updated : Jan 20 2025, 04:41 AM IST

ಸಾರಾಂಶ

ಮಂಚೇಗೌಡ ರಸ್ತೆ ದಾಟಲು ಬೈಕ್ ನಿಲ್ಲಿಸಿ‌ಕೊಂಡು ನಿಂತಿದ್ದ ವೇಳೆ ಮದ್ದೂರು ಕಡೆಯಿಂದ ಅತಿವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿಯಾಗಿ ಮಂಚೇಗೌಡ ತೀವ್ರ ಗಾಯಗೊಂಡಿದ್ದಾರೆ. ಜತೆಯಲ್ಲಿದ್ದ ಮಹೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.  

 ಕೆ.ಎಂ.ದೊಡ್ಡಿ : ಬುಲೆಟ್ ಬೈಕ್ ಡಿಕ್ಕಿಯಾಗಿ ರಸ್ತೆ ದಾಟಲು ನಿಂತಿದ್ದ ಬೈಕ್ ಸವಾರ ಮೃತಪಟ್ಟಿರುವ ಘಟನ ಮದ್ದೂರು-ಮಳವಳ್ಳಿಯ ದೇವರಹಳ್ಳಿ ರಸ್ತೆಯ ಐಟಿಐ ಕಾಲೇಜು ಸಮೀಪ ಶನಿವಾರ ರಾತ್ರಿ ನಡೆದಿದೆ.

ಸಮೀಪದ ದೊಡ್ಡರಸಿನಕೆರೆ ಗ್ರಾಮದ ಗ್ರಾಪಂ ಮತ್ತು ಸೊಸೈಟಿ ಮಾಜಿ ಅಧ್ಯಕ್ಷ ಡಿ.ಎಂ.ಮಂಚೇಗೌಡ (50) ಅಪಘಾತದಿಂದ ಮೃತಪಟ್ಟವರು.

ಮಂಚೇಗೌಡ ರಸ್ತೆ ದಾಟಲು ಬೈಕ್ ನಿಲ್ಲಿಸಿ‌ಕೊಂಡು ನಿಂತಿದ್ದ ವೇಳೆ ಮದ್ದೂರು ಕಡೆಯಿಂದ ಅತಿವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿಯಾಗಿ ಮಂಚೇಗೌಡ ತೀವ್ರ ಗಾಯಗೊಂಡಿದ್ದಾರೆ. ಜತೆಯಲ್ಲಿದ್ದ ಮಹೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇಬ್ಬರನ್ನು ಭಾರತೀನಗರದ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಚೇಗೌಡ ಸಾವನಪ್ಪಿದರು.

ಬಳಿಕ‌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಂಚನಾಮೆ ನಡೆಸಿ ವಾರಸುದಾರರಿಗೆ ಮೃತದೇಹ ನೀಡಲಾಯಿತು. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಮಂಚೇಗೌಡರು ಮಾಜಿ ಸಚಿವ ಡಿ.ಸಿ.ತಮ್ಮಣ್ಣರ ಆಪ್ತರಾಗಿದ್ದು, ಕಲೆ ಮತ್ತು ಕ್ರೀಡಾ ಪ್ರೋತ್ಸಾಕರಾಗಿದ್ದರು. ಮಂಡ್ಯದ ಸಹಕಾರ ಯೂನಿಯನ್ ನಿರ್ದೇಶಕರಾಗಿ, ದೊಡ್ಡರಸಿನಕೆರೆ ಗ್ರಾಪಂ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರಾಗಿ ಕೆಲಸ‌ ನಿರ್ವಹಿಸಿ ಅಪಾರ ಸ್ನೇಹ ಬಳಗವನ್ನು ಸಂಪಾದಿಸಿದ್ದರು.

ಶ್ರೀಕಾಳಿಕಾಂಭ ಕ್ರೀಡಾ ಬಳಗ ಸ್ಥಾಪಿಸಿ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಸುತಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಜ.19 ರಂದು ಭಾನುವಾರ ಜರುಗಿತು.

ಮೀನು ಹಿಡಿಯಲು ಹೋಗಿ ಕೆರೆ ಬಿದ್ದು ವ್ಯಕ್ತಿ ಸಾವು

ಮಳವಳ್ಳಿ: ಮೀನು ಹಿಡಿಯಲು ಬಲೆ ಹಾಕಲು ಹೋಗಿದ್ದ ಮೀನುಗಾರ ಪಟ್ಟಣದ ಹೊರ ವಲಯದ ಮಾರೇಹಳ್ಳಿ ಕೆರೆಗೆ ಬಿದ್ದು ಮೃತ ಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ರಾತ್ರಿ ವೇಳೆ ಕೆರೆಗೆ ಬಲೆ ಬಿಟ್ಟು ಬೆಳಗಿನ ಜಾವ ಮೀನು ಹಿಡಿಯುವುದು ವಾಡಿಕೆ. ಅದರಂತೆ ಶನಿವಾರ ರಾತ್ರಿ ಗಂಗಾಮತ ಬಡಾವಣೆಯ ನಾಗರಾಜು ಮತ್ತು ಶಿವಣ್ಣ ಕೆರೆಯಲ್ಲಿ ಬೋಟ್‌ನಲ್ಲಿ ನಿಂತು ಬಲೆ ಬಿಡುವ ವೇಳೆ ಬೋಟ್ ಮಗುಚಿ ಕೆರೆಯಲ್ಲಿ ಮುಳುಗಿದೆ. ಈ ವೇಳೆ ಶಿವಣ್ಣ ಈಜಿ ದಡ ಸೇರಿದ್ದಾನೆ. ನಾಗರಾಜು ಈಜಲಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಭಾನುವಾರ ಬೆಳಗ್ಗೆ ಶವವನ್ನು ಹೊರತೆಗೆದು ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share this article