ಕೆಫೆ ಬಾಂಬ್‌ ಸ್ಫೋಟ ಎನ್‌ಐಎ ಮರುಸೃಷ್ಟಿ : ಬಾಂಬರ್‌ನನ್ನು ಕರೆತಂದು ಬಾಂಬ್‌ ಇಟ್ಟ ಬಗ್ಗೆ ಸ್ಥಳ ಮಹಜರ್‌

KannadaprabhaNewsNetwork |  
Published : Aug 06, 2024, 01:30 AM ISTUpdated : Aug 06, 2024, 05:54 AM IST
Rameshwaram caffe | Kannada Prabha

ಸಾರಾಂಶ

ಎನ್‌ಐಎ ಬೆಂಗಳೂರಿನಲ್ಲಿ ಕೆಫೆ ಬಾಂಬ್ ಸ್ಫೋಟದ ಮರುಸೃಷ್ಟಿ ಮಾಡಿದೆ. ಬಾಂಬರ್‌ನನ್ನು ಕರೆತಂದು ಬಾಂಬ್‌ ಇಟ್ಟ ಬಗ್ಗೆ ಸ್ಥಳ ಮಹಜರ್‌ ಮಾಡಲಾಯಿತು.

 ಬೆಂಗಳೂರು :  ಕಳೆದ ಮಾರ್ಚ್‌ನಲ್ಲಿ ಕುಂದಲಹಳ್ಳಿಯ ಕೆಫೆಗೆ ಬಾಂಬ್ ಇಟ್ಟಿದ್ದ ಶಂಕಿತ ಉಗ್ರನನ್ನು ಘಟನಾ ಸ್ಥಳಕ್ಕೆ ಕರೆತಂದು ಸೋಮವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ‘ವಿಧ್ವಂಸಕ ಕೃತ್ಯವನ್ನು ಮರು ಸೃಷ್ಟಿಸಿ’ ಮಹಜರ್ ನಡೆಸಿದರು.

ಕೆಫೆಗೆ ಬಾಂಬ್ ಇಟ್ಟು ಪರಾರಿಯಾಗಿದ್ದ ಇಸ್ಲಾಮಿಕ್ ಸ್ಟೇಟ್ಸ್ (ಐಸಿಸ್‌) ಸಂಘಟನೆಯ ಶಂಕಿತ ಉಗ್ರ ಶಿವಮೊಗ್ಗ ಜಿಲ್ಲೆಯ ಮುಸಾಬೀರ್ ಹುಸೇನ್‌ನನ್ನು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಎನ್‌ಐಎ ಬಂಧಿಸಿತ್ತು. ಬಳಿಕ ಬೆಂಗಳೂರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಎನ್‌ಐಎ, ಕೆಫೆ ಹಾಗೂ ಹೂಡಿ ಮಸೀದಿಗೆ ಶಂಕಿತ ಉಗ್ರನನ್ನು ಕರೆದೊಯ್ದು ಮಹಜರ್‌ ನಡೆಸಿದೆ.

ಇದೇ ಮಾ.1 ರಂದು ಕುಂದಲಹಳ್ಳಿ ಸಮೀಪ ಬ್ರೂಕ್‌ಫೀಲ್ಡ್‌ನ ಬಸ್ ನಿಲ್ದಾಣದ ಸನಿಹದ ರಾಮೇಶ್ವರಂ ಕೆಫೆಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಗ್ರಾಹಕನ ಸೋಗಿನಲ್ಲಿ ತೆರಳಿ ಬ್ಯಾಗ್‌ನಲ್ಲಿ ಸುಧಾರಿತ ಸ್ಫೋಟಕ ವಸ್ತು (ಐಇಡಿ) ತಂದಿಟ್ಟು ಮುಸಾಬೀರ್ ಪರಾರಿಯಾಗಿದ್ದ. ಇದಾದ ಕೆಲವೇ ಕ್ಷಣಗಳಲ್ಲಿ ಬಾಂಬ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಅದೇ ಪೋಷಾಕು ಅದೇ ರೂಟ್‌:

ಬಾಂಬ್ ಸ್ಫೋಟ ನಡೆದ ದಿನ ಕೆಫೆಗೆ ತುಂಬುದೋಳಿನ ಶರ್ಟ್‌, ತಲೆಗೆ ಪೋಲೋ ಕ್ಯಾಪ್ ಹಾಗೂ ಹೆಗಲಿಗೆ ಬ್ಯಾಗ್‌ ನೇತು ಹಾಕಿಕೊಂಡು ಮುಸಾಬೀರ್ ಬಂದಿದ್ದ. ಅಂದಿನ ಪೋಷಾಕಿನಲ್ಲೇ ಆತನನ್ನು ಅಧಿಕಾರಿಗಳು ಕರೆತಂದಿದ್ದರು. ಕೆಫೆ ಎದುರಿನ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಬಸ್ಸಿಳಿದು ಕೆಫೆಗೆ ತೆರಳಿ ಅಲ್ಲಿನ ಬಿಲ್ ಕೌಂಟರ್‌ನಲ್ಲಿ ರವೆ ಇಡ್ಲಿ ಪಡೆದು ಸಮೀಪದಲ್ಲೇ ಆತ ಕುಳಿತು ಬಾಂಬ್ ಇಟ್ಟು ತೆರಳಿದ್ದ ಸನ್ನಿವೇಶವನ್ನು ಮರು ಸೃಷ್ಟಿಸಿ ಎನ್‌ಐಎ ತಪಾಸಣೆ ನಡೆಸಿತು.

ಹೂಡಿ ಮಸೀದಿಯಲ್ಲಿ ಮಹಜರ್‌

ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಹೂಡಿ ಮಸೀದಿಗೆ ತೆರಳಿ ಬಟ್ಟೆ ಬದಲಾಯಿಸಿ ಮುಸಾಬೀರ್ ತಪ್ಪಿಸಿಕೊಂಡಿದ್ದ. ಆ ಮಸೀದಿಯಲ್ಲಿ ಅಂದು ಪತ್ತೆಯಾಗಿದ್ದ ಕ್ಯಾಪ್‌ ಸುಳಿವು ಆಧರಿಸಿಯೇ ಶಂಕಿತ ಉಗ್ರರನ್ನು ಎನ್‌ಐಎ ಬಂಧಿಸಿತ್ತು. ಹೀಗಾಗಿ ಮಸೀದಿಗೆ ಕೂಡ ಶಂಕಿತ ಉಗ್ರನನ್ನು ಕರೆದೊಯ್ದು ಅಧಿಕಾರಿಗಳು ಮಹಜರ್ ನಡೆಸಿದರು. ಈ ಮಹಜರ್ ವೇಳೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಬಾಂಬ್‌ ಇಡುವಾಗ ಧರಿಸಿದ್ದ ವೇಷ ತೊಡಿಸಿ ಪರಿಶೀಲನೆ

ಈ ಕೃತ್ಯದ ತನಿಖೆ ನಡೆಸಿದ ಎನ್‌ಐಎ ಹಾಗೂ ಸಿಸಿಬಿ ಪೊಲೀಸರು, ಸ್ಫೋಟದ ಹಿಂದೆ ಐಸಿಸ್‌ ಕೈವಾಡ ಶಂಕಿಸಿತ್ತು. ಕೊನೆಗೆ ಪಶ್ಚಿಮಬಂಗಾಳದ ಕೋಲ್ಕತಾ ನಗರದ ಹೊರವಲಯದಲ್ಲಿ ಮುಸಾಬೀರ್ ಹುಸೇನ್ ಹಾಗೂ ಸಂಚುಕೋರ ಅಬ್ದುಲ್ ಮತೀನ್ ತಾಹಾನನ್ನು ಎನ್‌ಐಎ ಬಂಧಿಸಿತ್ತು. ಇದುವರೆಗೆ ಈ ಪ್ರಕರಣದಲ್ಲಿ ಐವರು ಶಂಕಿತ ಉಗ್ರರು ಎನ್‌ಐಎ ಬಲೆಗೆ ಬಿದ್ದಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!